ಸಂಕಷ್ಟದಲ್ಲಿ ಹೊರಗುತ್ತಿಗೆ ನೌಕರರು

20sirsi3
Published on

ರಾಜೇಂದ್ರ ಶಿಂಗನಮನೆ ಶಿರಸಿ

ಕರೊನಾ ಕಾಲಘಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಬದುಕು ಅತಂತ್ರಕ್ಕೆ ಸಿಲುಕಿದೆ. ವಸತಿ ನಿಲಯಗಳು ಆರಂಭವಾಗದ ಕಾರಣ ಇತ್ತ ಕೆಲಸವೂ ಇಲ್ಲ, ಅತ್ತ ಸಂಬಳವೂ ಇಲ್ಲದಂತಾಗಿದೆ.

ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬಾಲಕ, ಬಾಲಕಿಯರ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಅಂದಾಜು 100 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ವಸತಿ ನಿಲಯಗಳಲ್ಲಿ ಸರ್ಕಾರದಿಂದಲೇ ವಾರ್ಡನ್, ಅಡುಗೆ ಸಿಬ್ಬಂದಿ, ಸಹಾಯಕರು, ಕಾವಲುಗಾರರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆದರೆ, ಬಹುತೇಕ ಕಡೆ ವಾರ್ಡನ್, ಮುಖ್ಯ ಅಡುಗೆಯವರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿಯನ್ನು ಖಾಸಗಿ ಕಂಪನಿಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಅಂದಾಜು 70 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿತ್ತು. ಪ್ರಸ್ತುತ ವಸತಿ ನಿಲಯಗಳು ಆರಂಭವಾಗದ ಕಾರಣ ಕೆಲಸವಿಲ್ಲದೆ ಹೊರಗುತ್ತಿಗೆ ನೌಕರರು ಜೀವನ ನಡೆಸುವುದು ಕಷ್ಟವಾಗಿದೆ.

ಕರೊನಾ ಅವಾಂತರ: ಜೂನ್​ನಿಂದ ಮಾರ್ಚ್ ಅಂತ್ಯದವರೆಗೂ ಸಿಬ್ಬಂದಿಗೆ ಸಂಬಳ ಕೊಡಲಾಗುತ್ತದೆ. ಮತ್ತೆ ಎರಡು ತಿಂಗಳ ರಜೆ ಬಳಿಕ ಜೂನ್​ನಿಂದ ಕೆಲಸಕ್ಕೆ ಸೇರಿಸಿಕೊಳ್ಳುವ ವ್ಯವಸ್ಥೆ ಮುಂದುವರಿದಿತ್ತು. ಸರಾಸರಿ 9ರಿಂದ 10 ಸಾವಿರ ರೂಪಾಯಿವರೆಗೆ ನೌಕರರಿಗೆ ಸಂಬಳ ಸಿಗುತ್ತಿತ್ತು. ಆದರೆ, ಕರೊನಾ ಲಾಕ್​ಡೌನ್ ಕಾರಣಕ್ಕೆ ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಈ ಸಿಬ್ಬಂದಿಗೆ ಬೇರೆ ಕೆಲಸಗಳನ್ನು ಮಾಡಲು ಅವಕಾಶ ಸಿಕ್ಕಿಲ್ಲ. ಈ ಎರಡು ತಿಂಗಳು ಯಾವ ಆದಾಯವು ಇಲ್ಲದಂತಾಗಿದೆ. ಈಗ ಶಾಲೆಗಳು ಆರಂಭವಾಗದ ಕಾರಣ ವಸತಿ ನಿಲಯಗಳ ಕಾರ್ಯಚಟುವಟಿಕೆಗಳು ಸ್ತಬ್ಧವಾಗಿವೆ. ಇದೀಗ ಜುಲೈ ಪೂರ್ಣಗೊಳ್ಳುತ್ತ ಬಂದರೂ ವಸತಿ ನಿಲಯಗಳ ಚಟುವಟಿಕೆ ಆರಂಭವಾಗುವ ಲಕ್ಷಣ ಇಲ್ಲ. ಹೀಗಾಗಿ ಈ ಸಿಬ್ಬಂದಿ ಕಂಗಾಲಾಗಿದ್ದಾರೆ.

ಸಹಾಯಧನ ನೀಡಿಲ್ಲ: ವಸತಿ ನಿಲಯಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ವಿುಕರಿಗೆ ಆಯಾ ಗುತ್ತಿಗೆ ಸಂಸ್ಥೆ ಮುಖ್ಯಸ್ಥರು ಸಹಾಯ ಮಾಡಿಲ್ಲ. ಕಾರ್ವಿುಕ ಇಲಾಖೆಯು ಬೇರೆ ಶ್ರಮಿಕ ವರ್ಗದವರಿಗೆ ನೀಡಿದಂತೆ ಕನಿಷ್ಠ 5 ಸಾವಿರ ರೂಪಾಯಿ ಮಾಸಿಕ ಸಹಾಯಧನವನ್ನೂ ನೀಡಿಲ್ಲ. ಇದ್ಯಾವುದೂ ಆಗದ ಕಾರಣ ಬಹುತೇಕ ಸಿಬ್ಬಂದಿ ಕುಟುಂಬ ಬೀದಿಗೆ ಬರುವಂತಾಗಿದೆ. ಮಾಡಲು ಕೆಲಸವನ್ನಾದರೂ ಕೊಡಿ, ಇಲ್ಲವೇ ಬದುಕಲು ಧನ ಸಹಾಯವನ್ನಾದರೂ ಮಾಡಿ ಎಂದು ಇವರು ಬೇಡಿಕೊಳ್ಳುವಂತಾಗಿದೆ.

ಹೊರ ಗುತ್ತಿಗೆಯಡಿ ತೆಗೆದುಕೊಂಡ ಸಿಬ್ಬಂದಿಯ ಗುತ್ತಿಗೆ ಮಾರ್ಚ್ ವೇಳೆಗೆ ಅಂತ್ಯವಾಗಿದೆ. ಪ್ರಸ್ತುತ ಶಾಲೆಗಳು ಆರಂಭವಾಗಿರದ ಕಾರಣ ಗುತ್ತಿಗೆ ಸಿಬ್ಬಂದಿಗೆ ವಸತಿ ನಿಲಯಗಳಲ್ಲಿ ಕೆಲಸಗಳು ಇರುವುದಿಲ್ಲ. ಹಾಗಾಗಿ ಅಗಸ್ಟ್ 15ರ ನಂತರ ಈ ಹಿಂದೆ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. | ಪುರುಷೋತ್ತಮ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕವಸತಿ ನಿಲಯದ ಕಾರ್ಯನಿರ್ವಹಣೆಯಿಂದ ಸಿಗುತ್ತಿದ್ದ ಸಂಬಳದಲ್ಲಿ ಬದುಕು ನಡೆಸುತ್ತಿದ್ದೆ. ಆದರೆ, ಕಳೆದೆರಡು ತಿಂಗಳಿಂದ ವಸತಿ ನಿಲಯಗಳು ಬಾಗಿಲು ತೆರೆದಿಲ್ಲ. ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಸಮಸ್ಯೆಯಾಗಿದೆ. ತಕ್ಷಣ ವಸತಿ ನಿಲಯಗಳಲ್ಲಿ ಈ ಹಿಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. | ಹೆಸರು ಹೇಳಲಿಚ್ಛಿಸದ ಕಾವಲುಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net