ಸಂಕಷ್ಟದಲ್ಲಿ ಜನ, ಸಂಭ್ರಮದಲ್ಲಿ ಶಾಸಕ; ಸದ್ದಿಲ್ಲದೆ ಅರಣ್ಯ ಇಲಾಖೆಗೆ ಭೂಹಕ್ಕು ವರ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ

WEB BKDDD
Published on

ಬ್ಯಾಕೋಡು: ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಜನರ ಗಮನಕ್ಕೆ ತಾರದೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುತ್ತಿದ್ದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆ ಕೇಳಬೇಕಾದ ಶಾಸಕರು ಕೆರೆ ಹಬ್ಬದ ಸಂಭ್ರಮದಲ್ಲಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದರು.

ಭಾನುವಾರ ಸಾಗರ ತಾಲೂಕಿನ ಹೊಸಕೊಪ್ಪದಲ್ಲಿ ಕಾಂಗ್ರೆಸ್ ಸ್ಥಳೀಯ ಘಟಕ ಆಯೋಜಿಸಿದ್ದ ಅಂಬಾರಗುಡ್ಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತಾಡಿ, ಜನಪ್ರತಿನಿಧಿಗಳು ಜನರ ಸಂಕಟಗಳಿಗೆ ದನಿ ಆಗಬೇಕು. ಅಂಬಾರಗುಡ್ಡ ವಿಚಾರದಲ್ಲಿ ಜನವಸತಿ ಪ್ರದೇಶಗಳನ್ನು ಸೇರಿಸಿ ಕಂದಾಯ ಭೂಮಿಯನ್ನು ಜೀವವೈವಿಧ್ಯವಲಯ ಭಾಗವಾಗಿ ಅರಣ್ಯ ಇಲಾಖೆಗೆ ಹಕ್ಕು ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಮೇಲೆ ಒತ್ತಡ ತರಬೇಕಾದ ಶಾಸಕರು ಮೌನವಾಗಿದ್ದಾರೆ ಎಂದರು.

ರಾಜಕೀಯ ಜನರ ಹೋರಾಟದ ಭಾಗವಾಗಬೇಕೇ ಹೊರತು ವ್ಯಾವಹಾರಿಕವಾಗಬಾದರು. ಭೂಮಿ ಹೋರಾಟ ಸಂದರ್ಭದಲ್ಲಿ ಲೋಹಿಯಾ ನಮಗೆ ಇದನ್ನೇ ಭೋದನೆ ಮಾಡಿದ್ದರು. ಇಂದಿಗೂ ನಾನು ಅವರ ಮಾತನ್ನು ಅನುಸರಿಸುತ್ತಿದ್ದೇನೆ. ಅಂಬಾರಗುಡ್ಡ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನದ ವಿರುದ್ಧ ಜನತಾ ಹೋರಾಟ ಸಂಘಟಿಸಿ ಉತ್ತರ ನೀಡಬೇಕಾಗಿದೆ. ಜನರು ಸ್ವಯಂಪ್ರೇರಣೆಯಿಂದ ಫೆ.16ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಗುಡ್ಡ ಉಳಿಸಿಕೊಂಡವರೇ ಅನಾಥ: ಅಂಬಾರಗುಡ್ಡದ ತಪ್ಪಲಿನಲ್ಲಿರುವ 3,750 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮುನ್ನ ನಿಯಮಾವಳಿ ಪಾಲನೆ ಮಾಡಿಲ್ಲ. ಈ ಮೂಲಕ ಸ್ಥಳೀಯ ನಿವಾಸಿಗಳನ್ನು ವಂಚಿಸಲಾಗಿದೆ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಜನ ವಿರೋಧಿ ನಿಲುವು ತಾಳಿದೆ. ಹದಿನೈದು ವರ್ಷಗಳ ಹಿಂದೆ ಅಂಬಾರಗುಡ್ಡ ಗಣಿಗಾರಿಕೆ ಆರಂಭ ಆದಾಗ ಸರ್ಕಾರ ಸುಮ್ಮನೆ ಇತ್ತು. ಆದರೆ ಜನ ಹೋರಾಟ ಮಾಡಿ ಗುಡ್ಡ ಉಳಿಸಿಕೊಂಡರು. ಈಗ ಅದೇ ಜನರನ್ನು ಸರ್ಕಾರ ಅನಾಥ ಮಾಡುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net