

ಶಿರಸಿ: ತಾಲೂಕಿನ ಪೂರ್ವ ಭಾಗದಲ್ಲಿ ಭೂಮಿ ಗೇಣಿ ಪಡೆದು ಕೃಷಿಯಲ್ಲಿ ತೊಡಗಿರುವ ರೈತರಿಗೆ ನಿರಂತರ ಮಳೆ ಸಮಸ್ಯೆ ತಂದೊಡ್ಡಿದೆ. ಭೂಮಿಗೆ ನೀಡಿದ ಬಾಡಿಗೆ ಹಣದ ಜತೆ ವರ್ಷದ ಶ್ರಮ ಸಂಪೂರ್ಣ ಮಣ್ಣುಪಾಲಾಗುತ್ತಿದೆ.
ತಾಲೂಕಿನ ಪೂರ್ವಭಾಗದ ಬನವಾಸಿ ಹೋಬಳಿಯ ಹಲವೆಡೆ ಭೂ ಮಾಲೀಕರಿಂದ ಕರಾರಿನ ಮೇರೆಗೆ ಭೂಮಿ ಪಡೆದು ಕೃಷಿ ನಡೆಸುವ ಗೇಣಿ ಕೃಷಿ ವ್ಯವಸ್ಥೆ ಜಾರಿಯಲ್ಲಿದೆ. ಪ್ರಸಕ್ತ ವರ್ಷ 8 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ, 500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 600 ಹೆಕ್ಟೇರ್ ಶುಂಠಿ ಬೆಳೆಯಲಾಗಿದೆ. ಇದರಲ್ಲಿ ಅಂದಾಜು 3 ಸಾವಿರ ಹೆಕ್ಟೇರ್ನಲ್ಲಿ ಭತ್ತ, 300 ಹೆಕ್ಟೇರ್ ಶುಂಠಿ ಹಾಗೂ 200 ಹೆಕ್ಟೇರ್ಗೂ ಹೆಚ್ಚು ಮೆಕ್ಕೆಜೋಳ ಕ್ಷೇತ್ರದಲ್ಲಿ ಗೇಣಿ ರೈತರು ಕೃಷಿ ಮಾಡಿದ್ದಾರೆ. ಶೇ. 40ರಷ್ಟು ಕ್ಷೇತ್ರದಲ್ಲಿ ಗೇಣಿ ಪದ್ಧತಿಯಲ್ಲಿ ರೈತರು ಕೃಷಿ ಮಾಡಿದ್ದಾರೆ. ಬನವಾಸಿ, ನರೂರು, ಅಜ್ಜರಣಿ, ಭಾಶಿ, ಮೊಗಳ್ಳಿ, ತಿಗಣಿ, ಕಲಕರಡಿ, ಮಧುರವಳ್ಳಿ, ಅಂಡಗಿ, ದಾಸನಕೊಪ್ಪ, ಬಂಕನಾಳ, ಕೊರ್ಲಕಟ್ಟಾ ಹಾಗೂ ಇನ್ನಿತರೆಡೆ ಮಳೆಯಿಂದ ಗೇಣಿ ಕೃಷಿಕರು ಹೆಚ್ಚಿನ ಹಾನಿ ಅನುಭವಿಸಿದ್ದಾರೆ.
ಗೇಣಿ ಕೃಷಿಕರು ಆರಂಭದಲ್ಲಿ ಮಳೆಯಿಲ್ಲದೆ ಬಿತ್ತನೆ, ನಾಟಿ ಮಾಡಲು ವಿಳಂಬ ಮಾಡಿದ್ದರು. ನಂತರ ಅತಿವೃಷ್ಟಿಯು ಬಿತ್ತನೆಗೆ ಅಡ್ಡಿ ಮಾಡಿತು. ಎತ್ತರದ ಪ್ರದೇಶಗಳಲ್ಲಿ ಗದ್ದೆಯಿದ್ದವರು ಅಲ್ಪಾವಧಿಯಲ್ಲಿ ಫಸಲು ನೀಡುವ ಮಳೆಯಾಶ್ರಿತ ಭತ್ತ ಬಿತ್ತನೆ ಮಾಡಿದ್ದರು. ಅವೆಲ್ಲ ಈಗ ಮಳೆ ನೀರಿಗೆ ಸಿಲುಕಿ ಹಾನಿಯಾಗಿವೆ. ಶುಂಠಿ ಕ್ಷೇತ್ರದ ಶೇ. 50ರಷ್ಟು ಗಡ್ಡೆ ಕೊಳೆಗೆ ನಾಶವಾದರೆ, ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧೆ, ನಿರಂತರ ಮಳೆಯಿಂದ ಕೊಳೆ ರೋಗ ವ್ಯಾಪಿಸಿದೆ. ಮಳೆಯ ಅಬ್ಬರದಿಂದಾಗಿ ಭತ್ತದ ಗದ್ದೆಯಲ್ಲಿನ ತೆನೆಗಳು ನೆಲಕ್ಕೊರಗಿ ನೀರಿನಲ್ಲಿ ಮುಳುಗಿವೆ. ಕಟಾವಿಗೆ ಬಂದ ಗದ್ದೆಗಳಲ್ಲಿ ನೀರು ನಿಂತು ಫಸಲು ಕೈಗೆ ಸಿಗದಂತಾಗಿದೆ. ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು ಕೂಡ ಸಿಗದಂತಾಗಿದೆ. ಹೀಗಾಗಿ, ಸಾಲದ ಕೂಪಕ್ಕೆ ಬೀಳುವಂತಾಗಿದೆ ಎಂದು ಗೇಣಿ ಕೃಷಿಕರು ಗೋಳು ತೋಡಿಕೊಳ್ಳುತ್ತಿದ್ದಾರೆ.
ಕಟಾವಿಗೆ ಬರುವ ಹೊತ್ತಿಗೆ ಅಕಾಲಿಕವಾಗಿ ಮಳೆ ಸುರಿದಿದೆ. ಗದ್ದೆ ತುಂಬ ನೀರು ನಿಂತು ಭತ್ತ ಹಾಳಾಗುತ್ತಿದೆ. ಶುಂಠಿಯು ಕೊಳೆರೋಗಕ್ಕೆ ತುತ್ತಾಗಿದೆ. ಕಾಳು ಗಟ್ಟಿಯಾಗಿದ್ದ ಭತ್ತವು ನೀರಿನಲ್ಲಿ ನೆನೆದರೆ ಮತ್ತೆ ಉಪಯೋಗಕ್ಕೆ ಬರುವುದಿಲ್ಲ. ಹಾಕಿದ ಹಣ, ಶ್ರಮ ಎಲ್ಲವೂ ವ್ಯರ್ಥವಾಗಿದೆ. ಎಕರೆಯೊಂದಕ್ಕೆ 6 ಕ್ವಿಂಟಾಲ್ ಭತ್ತ ನೀಡುವ ಒಪ್ಪಂದದ ಮೇರೆಗೆ ಭೂಮಿ ಗೇಣಿ ಪಡೆದಿದ್ದೇವು. ಈಗ ಎಲ್ಲವೂ ನೀರು ಪಾಲಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದು, ಮುಂದಿನ ದಾರಿ ಕಾಣದಾಗಿದೆ.| ದಿನೇಶ ಉಪ್ಪಾರ, ಗೇಣಿ ಕೃಷಿಕ
ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದೆ. ಹೀಗಾಗಿ, ವಿವಿಧೆಡೆ ಬೆಳೆ ನಾಶವಾಗಿದೆ. ಬನವಾಸಿ ಹೋಬಳಿ ಮಾತ್ರವಲ್ಲದೆ, ಹಲವೆಡೆ ಕೃಷಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕುರಿತು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. | ಸತೀಶ ಹೆಗಡೆ, ತೋಟಗಾರಿಕೆ ಇಲಾಖೆ ಅಧಿಕಾರಿ
ಬಾಳೆ ಬೆಳೆಗಾರರಿಗೂ ಕಷ್ಟ
ಅತಿವೃಷ್ಟಿ ಹಾಗೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯು ಬಾಳೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಯಿಗಳು ಸರಿಯಾಗಿ ಬಲಿಯದಿರುವುದು ಒಂದೆಡೆಯಾದರೆ ಅಕಾಲಿಕವಾಗಿ ಸುರಿವ ಮಳೆ ರಭಸಕ್ಕೆ ಮರಗಳೇ ಧರೆಗುರುಳುತ್ತಿರುವುದು ಬನವಾಸಿ ಹೋಬಳಿ ರೈತರ ಶ್ರಮಕ್ಕೆ ಧಕ್ಕೆ ನೀಡಿದೆ. ತಾಲೂಕಿನ ಅಂಡಗಿ ಭಾಗದಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಎಕರೆಯೊಂದಕ್ಕೆ 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆಯಲಾಗಿದೆ. ತಿಂಗಳೊಳಗೆ ಬಾಳೆಗೊನೆ ಮಾರುಕಟ್ಟೆಗೆ ಹೋಗಲು ಸಿದ್ಧವಾಗ ಬೇಕಿತ್ತು. ಆದರೆ, ಮಳೆ ಹಾಗೂ ಪೋಷಕಾಂಶ ಕೊರತೆಯಿಂದ ಬಾಳೆ ನೆಟ್ಟು 11 ತಿಂಗಳಾದರೂ ಗೊನೆಯಲ್ಲಿನ ಕಾಯಿಗಳು ಹೀಚಿನಂತಿವೆ. ಪ್ರತಿ ಮಿಟ್ಲಿ ಬಾಳೆಗೊನೆ 10-12 ಕೆಜಿ ತೂಗುತ್ತಿತ್ತು. ಆದರೆ, ಈ ಬಾರಿ 4-6ಕೆಜಿ ತೂಗಿದರೆ ಹೆಚ್ಚು ಎಂದು ರೈತ ಚಂದ್ರು ಗೌಡ ಹೇಳುತ್ತಾರೆ. ‘ಅತಿಯಾದ ಮಳೆಯಿಂದ ಮಣ್ಣಿನಲ್ಲಿ ಪೋಷಕಾಂಶ ಕೊರತೆ ಉಂಟಾಗುತ್ತದೆ. ಭೂಮಿಯ ಹುಳಿ ಅಂಶ ಗಿಡಕ್ಕೆ ಹೋಗಿ ಇಳುವರಿ ಮೇಲೆ ಋಣಾತ್ಮಕ ಪರಿಣಾಮ ಬೀಳುತ್ತದೆ. ಬನಾನಾ ಸ್ಪೆಷಲ್ ಎಂಬ ಹಾಮೋನ್ ಸ್ಪ್ರೇ ನೀಡಿದರೆ ಕಾಯಿಗಳ ಗುಣಮಟ್ಟ ಹೆಚ್ಚುತ್ತದೆ’ ಎನ್ನುವುದಾಗಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಎನ್ನುತ್ತಾರೆ.