ಸಂಕಷ್ಟದಲ್ಲಿ ಗೂಡಂಗಡಿ ವ್ಯಾಪಾರಿಗಳು

20kglphoto-1.....
Published on

ಕೊಳ್ಳೇಗಾಲ: ವಾಹನ ದಟ್ಟಣೆ ತಡೆ, ಸುಗಮ ಸಂಚಾರಕ್ಕಾಗಿ ಪಟ್ಟಣ ಪೊಲೀಸರು ಗೂಡಂಗಡಿಗಳನ್ನು ತೆರವುಗೊಳಿಸಿ ಒಂದೆಡೆ ಸೂಕ್ತ ಕ್ರಮ ಕೈಗೊಂಡಿದ್ದರೆ, ಮತ್ತೊಂದೆಡೆ ಬೀದಿ ಬದಿ ಹೋಟೆಲ್ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಗ್ಗಲಿನಲ್ಲಿರುವ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ, ವಹಿವಾಟು ನಡೆಸುತ್ತಿದ್ದ ಬೀದಿ ಬದಿ ಹೋಟೆಲ್ ವ್ಯಾಪಾರಿಗಳ ಗೂಡಂಗಡಿಗಳನ್ನು ಸೋಮವಾರ ಪೊಲೀಸರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಹಲವು ವರ್ಷಗಳಿಂದ 21ಕ್ಕೂ ಹೆಚ್ಚು ಹೋಟೆಲ್‌ಗಳು ಸಂಜೆ ವೇಳೆ ಸಾಲಾಗಿ ನಿಂತು ವ್ಯಾಪಾರ ನಡೆಸುತ್ತಿದ್ದವು. ಬಸ್ ನಿಲ್ದಾಣ ಹಾಗೂ ಪಟ್ಟಣಕ್ಕೆ ಬಂದ ಸಾರ್ವಜನಿಕರಿಗೆ ಸಸ್ಯಾಹಾರ ಹಾಗೂ ಮಾಂಸಾಹಾರ ಪೂರೈಸುತ್ತಿದ್ದ್ದರು. ಪ್ರತಿ ಫಾಸ್ಟ್‌ಫುಡ್‌ನಲ್ಲೂ 3 ರಿಂದ 4 ಜನರು ಕೆಲಸ ಮಾಡುತ್ತಿದ್ದರು. ಇದನ್ನೇ ನಂಬಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದವು. ಆದರೆ ಈ ರಸ್ತೆಯಲ್ಲಿ ಉಂಟಾಗುತ್ತಿದ್ದ ವಾಹನದಟ್ಟಣೆ ತಡೆಗಾಗಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ವ್ಯಾಪಾರಿಗಳು ಅತಂತ್ರರಾಗಿದ್ದಾರೆ.

20ಕ್ಕೂ ಹೆಚ್ಚು ವರ್ಷಗಳಿಂದ ಈ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದು, ದಿಢೀರನೇ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಮಳಿಗೆ ಬಾಡಿಗೆ ಪಡೆದು ಹೋಟೆಲ್ ನಡೆಸಲು ಕಷ್ಟಸಾಧ್ಯ. ಹಳೇ ಬಸ್ ನಿಲ್ದಾಣವಿದ್ದ ಸಂದರ್ಭದಲ್ಲಿ ಅಂದಿನ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರು ಬೀದಿಬದಿ ಹೋಟೆಲ್ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಡಾ.ವಿಷ್ಣುವರ್ಧನ್ ರಸ್ತೆಯ ಸ್ಥಳ ಗುರುತಿಸಿಕೊಟ್ಟಿದ್ದರು. ಇದೀಗ ನೂತನ ಬಸ್ ನಿಲ್ದಾಣ ಆರಂಭವಾಗಿದೆ. ವಾಹನಗಳ ದಟ್ಟಣೆ ನೆಪವೊಡ್ಡಿ ದಿಢೀರನೆ ಜಾಗ ಖಾಲಿ ಮಾಡಿಸಿದರೆ ಎಲ್ಲಿ ಹೋಗುವುದು? ಈ ವ್ಯಾಪಾರ ಇಲ್ಲದ್ದರೆ ಕುಟುಂಬ ನಡೆಸುವುದು ಹೇಗೆ? ಹಾಗಾಗಿ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net