ಸಂಕಷ್ಟದಲ್ಲಿ ಕೈಹಿಡಿಯುವ ಡಿಸಿಸಿ ಬ್ಯಾಂಕ್

2 kyalanuru 1
Published on

ಕ್ಯಾಲನೂರು: ಕರೊನಾ ಸಂಕಷ್ಟದಲ್ಲೂ ನಿಮಗೆ ಬಡ್ಡಿ ರಹಿತ ಸಾಲ ನೀಡಿ ಆರ್ಥಿಕ ಶಕ್ತಿ ತುಂಬುತ್ತಿರುವ ಡಿಸಿಸಿ ಬ್ಯಾಂಕ್ ದೈವ ಸಮಾನ. ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ರೈತರ ಮತ್ತು ಮಹಿಳೆಯರ ಮೇಲಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಕೋಲಾರ ತಾಲೂಕಿನ ಮದ್ದೇರಿ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ಗುರುವಾರ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ 1.70 ಕೋಟಿ ರೂ. ಸಾಲ ವಿತರಿಸಿ ಮಾತನಾಡಿ, ಸಂಕಷ್ಟದಲ್ಲಿ ಯಾರು ನೆರವಿಗೆ ಬಂದರೂ ಅವರು ದೇವರಿಗೆ ಸಮಾನ, ಅಂತಹ ಸ್ಥಾನದಲ್ಲಿ ಡಿಸಿಸಿ ಬ್ಯಾಂಕ್ ನಿಂತಿದೆ ಎಂದರು.

ಹಿಂದೆ ಮುಚ್ಚುವ ಸ್ಥಿತಿಯಲ್ಲಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲು ಬ್ಯಾಲಹಳ್ಳಿ ಗೋವಿಂದಗೌಡ ಅವರಿಗೆ ಅಡ್ಡಿಪಡಿಸಿದವರಲ್ಲಿ ನಾನೂ ಒಬ್ಬ, ಆದರೆ ಅಂದು ಅವರು ಅಧ್ಯಕ್ಷರಾಗದಿದ್ದರೆ ಇಂದು ಬ್ಯಾಂಕ್ ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂದರು.

ಅವರು ಬದುಕಿರುವವರೆಗೂ ಅವರೇ ಅಧ್ಯಕ್ಷರು, ಯಾರೂ ಅವರ ವಿರುದ್ಧ ನಿಲ್ಲಲಾರರು. ದಿವಾಳಿಯಾಗಿದ್ದ ಬ್ಯಾಂಕ್ ಇಂದು ಮನೆಬಾಗಿಲಿಗೆ ಬಂದು ಬಡ್ಡಿರಹಿತ ಸಾಲ ನೀಡುವ ಶಕ್ತಿ ಪಡೆದಿದೆ ಎಂದರೆ ಅದರ ಹಿಂದೆ ಗೋವಿಂದಗೌಡ ಮತ್ತವರ ಆಡಳಿತ ಮಂಡಳಿ ಶ್ರಮವಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಸಾಲ ನೀಡುವಾಗ ಜಾತಿ, ಪಕ್ಷ ನೋಡುವುದಿಲ್ಲ. ಎಲ್ಲ ತಾಯಂದಿರು ಸಂಘ ಕಟ್ಟಿಕೊಂಡು ಬಂದಾಗ ಯಾವ ಪಕ್ಷ, ಜಾತಿ ಎಂದು ಪ್ರಶ್ನಿಸದೆ ಸಾಲ ನೀಡಿದ್ದೇವೆ. ನಿಮ್ಮ ಬದುಕಿಗೆ ಆಸರೆಯಾಗಿರುವ ಬ್ಯಾಂಕಿನಲ್ಲೇ ಠೇವಣಿ ಇಡಬೇಕಾರುವುದು ನಿಮ್ಮ ಜವಾಬ್ದಾರಿ ಎಂದರು.

ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಮುಖಂಡ ಮದ್ದೇರಿ ರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ಎಸ್‌ಎಫ್‌ಸಿಎಸ್ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷೆ ಮುನಿರಾಮಕ್ಕ, ಮಾಜಿ ಅಧ್ಯಕ್ಷ ವೆಂಕಟರಾಂ, ವಕೀಲ ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net