

ದೇವನಹಳ್ಳಿ: ಸರ್ಕಾರ ಬೀದಿಬದಿ ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸದೆ ಅವರನ್ನು ಕಡೆಗಣಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದ ಜೆಡಿಎಸ್ ಭವನದ 2ನೇ ಮಹಡಿ ಹಾಗೂ ಪಿಎಲ್‌ಡಿ ಬ್ಯಾಂಕ್ ವಾಣಿಜ್ಯ ಕಟ್ಟಡದ ಮೊದಲ ಮಹಡಿಯನ್ನು ಭಾನುವಾರ ಉದ್ಘಾಟಿಸಿದ ಬಳಿಕ ಹಳೇ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದರು.
ನಮ್ಮ ಸರ್ಕಾರವಿದ್ದಾಗ ಬೀದಿಬದಿ ವ್ಯಾಪಾರಿಗಳ ತೊಂದರೆಗಳಿಗೆ ಸ್ಪಂದಿಸಿ ಅವರಿಗೆ ಯಾವುದೇ ಅಡಮಾನವಿಲ್ಲದೆ 10 ಸಾವಿರ ರೂ.ಗಳನ್ನು ಬಡ್ಡಿರಹಿತ ಸಾಲ ವಿತರಣೆ ಮಾಡುವಂತೆ ಮಾಡಿದ್ದೆ. ಆದರೆ, ಈಗಿನ ಸರ್ಕಾರ ಅದನ್ನು ಕಡೆಗಣಿಸಿದೆ ಎಂದರು.
ಅಂದು ಬೀದಿಬದಿ ಕುಟುಂಬ ನಿರ್ವಹಣೆಗೆ ಅನುಕೂಲವಾಗುವಂತೆ ಸುಮಾರು 4.5 ಲಕ್ಷ ಬೀದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೆ. ನಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಜನಪರ ಯೋಜನೆ ಕೊಟ್ಟರೂ ಜನ ಮಾತ್ರ ನಮಗೆ ಮತ ನೀಡಲಿಲ್ಲ ಎಂದು ಬೇಸರಿಸಿದರು.
ಬಿಜೆಪಿಯಿಂದ ಯೋಜನೆ ಮೂಲೆಗುಂಪು: ನಮ್ಮ ಅವಧಿಯಲ್ಲಿ 20 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಚಿಂತಿಸಿದ್ದೆ. ಕಾಂಗ್ರೆಸ್‌ನವರು ಇದಕ್ಕೆ ಒಪ್ಪಿರಲಿಲ್ಲ. ಆದರೂ ನಾನು ಸಾಲ ಮನ್ನಾ ಮಾಡಿದೆ. ಅಂದು ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಎಚ್‌ಡಿಕೆ ದೂರಿದರು.
ನಿಸರ್ಗ ನಾರಾಯಣಸ್ವಾಮಿ ಮನಸ್ಸು ಮಾಡಿ ಬಿಜೆಪಿಗೆ ಹೋಗಿದ್ದರೆ 25 ಕೋಟಿ ನೀಡಲು ಮುಂದಾಗಿದ್ದರೂ ದೇವನಹಳ್ಳಿ ಶಾಸಕ ಯಾವುದಕ್ಕೂ ಬೆಲೆ ನೀಡದೇ ಪಕ್ಷಕ್ಕೆ ಬೆಲೆ ನೀಡಿದ್ದಾರೆ ಎಂದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ನನಗೆ ಜೆಡಿಎಸ್‌ನಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಕಣ್ಣುಗಳಿದ್ದಂತೆ. ಅವರ ಆಜ್ಞಾನುಸಾರ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ತಾಲೂಕಿನ ಅನೇಕ ಕಾಮಗಾರಿ ಮಾಡಿದೆ. ರೋಗಗಳಿಂದ ನರಳುತ್ತಿರುವವರಿಗೆ ಮುಖ್ಯಮಂತ್ರಿಗಳ ನಿಧಿಯಿಂದ ಸಹಾಯ ಮಾಡಿದ್ದೇವೆ. ಮುಂದಿನ 2023ಕ್ಕೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಎಂಎಲ್ಸಿ ರಮೇಶ್‌ಗೌಡ, ಬಮುಲ್ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ನರಸಿಂಹಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಗುರಪ್ಪ, ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಉಪಾಧ್ಯಕ್ಷ ವಿ.ಹನುಮಂತಪ್ಪ, ಕಾರ್ಯಾಧ್ಯಕ್ಷರಾದ ದೊಡ್ಡಸಣ್ಣೆ ಮುನಿರಾಜು, ಲಕ್ಷ್ಮಣ್ ಎಂ., ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ, ವಿಶ್ವನಾಥಪುರ ಗ್ರಾಪಂ ಮಾಜಿ ಅಧ್ಯಕ್ಷ ಬೊಮ್ಮವಾರದ ರಾಮಮೂರ್ತಿ, ದೇವನಹಳ್ಳಿ ಟೌನ್ ಅಧ್ಯಕ್ಷ ಮುನಿನಂಜಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಯುವ ಘಟಕದ ಅಧ್ಯಕ್ಷ ಭರತ್, ತಾಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮತ್ತಿತರರು ಇದ್ದರು.
ಪಂಚರತ್ನ ಸೂತ್ರಗಳಿಂದ ಪ್ರಗತಿ: ನಾವು ರೂಪಿಸಿರುವ ಪಂಚರತ್ನ ಸೂತ್ರಗಳ ಯೋಜನೆಯಿಂದ ಬಡವರ ಬಾಳಿಗೆ ಆಶಾಕಿರಣವಾಗಲಿದೆ. ವಿಶೇಷವಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು 6000 ಗ್ರಾಪಂಗಳಲ್ಲಿ ಪ್ರತಿ ಕುಟುಂಬದ ಯಾವುದೇ ಜಾತಿ ಇರಲಿ ಸಮಾನ ಶಿಕ್ಷಣ ನೀತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಶಾಲೆ ತೆರೆಯುವುದು ನಮ್ಮ ಉದ್ದೇಶ ಎಂದು ಕುಮಾರಸ್ವಾಮಿ ತಿಳಿಸಿದರು.