ಸಂಕಷ್ಟಕ್ಕೆ ನೆರವಾಗಿ ರೈತ ಮುಖಂಡರಿಂದ ತಹಸೀಲ್ದಾರ್‌ಗೆ ಮನವಿ

27.04.2020 SDLP 01
Published on

ಶಿಡ್ಲಘಟ್ಟ: ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಕೂಡಲೇ ಸರ್ಕಾರ ಧಾವಿಸುವಂತೆ ಒತ್ತಾಯಿಸಿ ರೈತ ಮುಖಂಡರು ತಹಸೀಲ್ದಾರ್ ಕೆ.ಅರುಂಧತಿ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ದ್ರಾಕ್ಷಿ, ದಾಳಿಂಬೆ, ಸೀಬೆಹಣ್ಣು ಮುಂತಾದ ಬೆಳೆಗಳು ತೋಟದಲ್ಲೇ ಕೊಳೆಯುತ್ತಿದ್ದರೆ, ಹೂವುಗಳು ತಿಪ್ಪೆ ಸೇರುತ್ತಿವೆ, ಕಟಾವಾಗದೆ ಹಣ್ಣಾಗಿ ಉದುರುತ್ತಿವೆ, ಆದ್ದರಿಂದ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಮಾಡುವ ಜತೆಗೆ ಜಿಲ್ಲೆಯಲ್ಲಿ ಕೋಲ್ಡ್ ಸ್ಟೊರೇಜ್ ನಿರ್ಮಿಸುವಂತೆ ಮುಖಂಡ ಬಿ.ಮುನಿಕೆಂಪಣ್ಣ ಒತ್ತಾಯಿಸಿದರು.

ದುಬಾರಿ ಬೆಲೆಗೆ ಪಶು ಆಹಾರ ಮಾರಾಟವಾಗುತ್ತಿದ್ದು ಹೈನುಗಾರರು ಸಂಕಷ್ಟ ಎದುರಿಸುವಂತಾಗಿದೆ, ಎಂಆರ್‌ಪಿ ಬೆಲೆಗೆ ಪಶುಆಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು. 300 ರೂಪಾಯಿಗೆ ಮಾರಾಟವಾಗುತ್ತಿರುವ ರೇಷ್ಮೆಗೂಡಿನ ಬೆಲೆ ಏರಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಅಗ್ರಹಿಸಿದರು.

ಕೃಷಿ ಚಟುವಟಿಕೆಗಳಿಗೆ ಹೊಸಸಾಲ, ಗ್ರಾಮ ಪಂಚಾಯಿತಿಯಿಂದ ರಸಗೊಬ್ಬರ ಪೂರೈಸುವ ವ್ಯವಸ್ಥೆ, ಪಡಿತರ ಚೀಟಿಗಳು ಇಲ್ಲದವರಿಗೂ ಪರಿತರ ವಿತರಣೆ, ಟೋಲ್‌ಕೇಂದ್ರದಲ್ಲಿ ರೈತರಿಂದ ಸುಂಕು ವಸೂಲಿಗೆ ವಿನಾಯಿತಿ ನೀಡಬೇಕು ಮುಖಂಡರು ಮನವಿ ಮಾಡಿದರು.

ಇಲಾಖೆ ಹಂತದಲ್ಲಿರುವ ಸಮಸ್ಯೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಲಾಗುವುದು, ಉಳಿದ ಮನವಿಗಳ ಕುರಿತು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವುದಾಗಿ ತಹಸೀಲ್ದಾರ್ ಕೆ.ಅರುಂಧತಿ ಭರವಸೆ ನೀಡಿದರು.

ಮುಖಂಡರಾದ ಪ್ರತೀಶ್, ಅಂಬರೀಷ, ಡಿ.ವಿ.ನಾರಾಯಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net