

ತೀರ್ಥಹಳ್ಳಿ: ಲಾಕ್ಡೌನ್ ಸಂಕಷ್ಟದ ಸಮಯದಲ್ಲಿಯೂ ಗ್ರಾಮೀಣ ಜನರಿಗೆ ನೆರವಾಗಿದ್ದು ಉದ್ಯೋಗ ಖಾತರಿ ಯೋಜನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇಂದಾವರ ಮಕ್ಕಿಮನೆ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಹಾಲಕ್ಷ್ಮೀ ಉದ್ಯೋಗ ಖಾತ್ರಿ ಕೆಲಸಗಾರರ ಸಂಘ ಉದ್ಘಾಟಿಸಿ ಮಾತನಾಡಿ, ಕರೊನಾ ವೇಳೆ ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರತಿದಿನ 3,000 ಗ್ರಾಮೀಣ ಜನರು ಕೆಲಸ ಮಾಡಿದ್ದಾರೆ. ಕೆರೆಗಳ ಪುನಶ್ಚೇತನ, ರಸ್ತೆ ಕಾಮಗಾರಿ, ಅರಣ್ಯೀಕರಣದಂತಹ ಕೆಲಸದಿಂದ ಕೋಟ್ಯಂತರ ರೂ. ಬೆಲೆಬಾಳುವ ಸರ್ಕಾರದ ಆಸ್ತಿ ಸೃಷ್ಟಿಸಿದ್ದಾರೆ. ಉದ್ಯೋಗ ಖಾತರಿಯಲ್ಲಿ ತೊಡಗಿರುವ ಕೆಲಸಗಾರರು ಸಂಘಟಿತರಾಗಿ ಯೋಜನೆ ಸಂಪೂರ್ಣ ಪ್ರಯೋಜನ ಪಡೆಯಲು ಮಹಾಲಕ್ಷ್ಮೀ ಕೆಲಸಗಾರರ ಸಂಘ ರಚಿಸಲಾಗಿದೆ ಎಂದು ಹೇಳಿದರು.
ಕರೊನಾ ತಡೆಗೆ ಪ್ರತಿಯೊಬ್ಬರೂ ಸರ್ಕಾರ ಸೂಚಿಸಿದ ನಿಯಮ ಪಾಲಿಸಬೇಕು. ಹೊರಗಿನಿಂದ ಬಂದವರಿಗೆ ನೀವೇ 15 ದಿನ ಪ್ರತ್ಯೇಕವಾಗಿ ಇರಿಸಿ ಅಂತರ ಕಾಪಾಡಿ, ನಿಮ್ಮ ಊರುಗಳಲ್ಲಿ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು ಎಂದರು.
ಎಸ್ಎಮ್ಸ್ಎಸ್ ಸಂಸ್ಥೆ ನಿರ್ದೇಶಕ ಫಾದರ್ ರೋಷನ್ಪಿಂಟೋ ಮಾತನಾಡಿ, ಜಿಪಂ ಸಹಕಾರದೊಂದಿಗೆ ನಮ್ಮ ಸಂಸ್ಥೆ ಉದ್ಯೋಗ ಖಾತರಿ ಸಂಘ ರಚಿಸಲು ಪ್ರೇರಣೆ ನೀಡುತ್ತಿದೆ. ಯೋಜನೆಯ ಸಂಪೂರ್ಣ ಲಾಭ ಪಡೆಯಲು ಆಸಕ್ತಿ ನಮ್ಮಿಂದ ಬರಬೇಕು. ಸಂಘದ ಮೂಲಕ ಪ್ರತಿಯೊಬ್ಬರೂ ನೂರು ದಿನದ ಕೆಲಸ ಪಡೆಯಲು ನಿರ್ಧಾರ ಮಾಡಿ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಅನಿತಾ ಶ್ರೀಧರ್, ಗುಲಾಬಿ ನಾಗಪ್ಪ, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಸುರೇಶ್ ನಾಯಕ್, ಸಂಯೋಜಕ ವಿನ್ಸೆಂಟ್ ಡಿಮೆಲೊ, ಗಿರಿಜಾ, ಪಿಡಿಒ ತಿಮ್ಮಪ್ಪ, ಗಿರಿರಾಜ್ ಇದ್ದರು.