

ನಂದಗುಡಿ: ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಸೋಂಕು ಇಳಿಮುಖವಾದರೆ ಲಾಕ್‌ಡೌನ್ ಸಡಿಲಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತದೆ. ಆದರೂ ಸಾರ್ವಜನಿಕರು ಕರೊನಾ ನಿಯಮ ಚಾಚೂ ತಪ್ಪದೆ ಪಾಲಿಸಬೇಕು ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಂದಗುಡಿ ಹೋಬಳಿ ಶಿವನಪುರ ಗ್ರಾಪಂ ವ್ಯಾಪ್ತಿಯ ಭೀಮಾಪುರ, ಮೋತ ಕದಹಳ್ಳಿ, ಗೊಲ್ಲಹಳ್ಳಿ, ಮಾಲಿಯಾಪ್ಪನಹಳ್ಳಿ, ಶೆಟ್ಟಹಳ್ಳಿ, ಕರಪನಹಳ್ಳಿ, ಕೆ. ಸತ್ಯವಾರ ಗ್ರಾಮಗಳಲ್ಲಿ ಮಂಗಳವಾರ ಕಡುಬಡವರಿಗೆ ಸುಮಾರು 2 ಸಾವಿರ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಕರೊನಾ ಕಾರಣದಿಂದ ಎಲ್ಲವೂ ಅಯೋಮಯವಾಗಿದೆ. ಅಭಿವೃದ್ಧಿ ಕಾರ್ಯಗಳಿಗೂ ಪೆಟ್ಟು ಬಿದ್ದಿದೆ. ಎಲ್ಲವೂ ಸರಿಯಾಗಿ ಮೊದಲಿನಂತೆ ಸಹಜ ಸ್ಥಿತಿಗೆ ಬರಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಜನತೆ ಹತಾಶರಾಗದೆ ಧೈರ್ಯದಿಂದ ಪರಿಸ್ಥಿತಿ ಎದುರಿಸಬೇಕು ಎಂದು ಕರೆ ನೀಡಿದರು.
ಕರೊನಾ ಲಾಕ್‌ಡೌನ್‌ನಿಂದಾಗಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಸೇರಿ ವಿವಿಧ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗವಿಲ್ಲದೆ ಜೀವನ ನಿರ್ವಹಣೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಪಂಚಾಯಿತಿಗಳಲ್ಲಿ ಆಹಾರ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇನೆ. ಇದಕ್ಕೆ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಒತ್ತಾಸೆಯಾಗಿದ್ದಾರೆ. ಎಲ್ಲರ ಸಹಕಾರದಿಂದ ಹೊಸಕೋಟೆ ಕ್ಷೇತ್ರದಾದ್ಯಂತ ಸಾಧ್ಯವಾದಷ್ಟು ಜನರ ಸಂಕಷ್ಟಕ್ಕೆ ನೆರವಾಗಿದ್ದೇನೆ ಎಂದರು.
ಸರ್ಕಾರದಿಂದ ಅಗತ್ಯ ಕ್ರಮ: ಕರೊನಾ ಸೋಂಕು ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅಗತ್ಯ ಕ್ರಮ ಕೈಗೊಂಡಿದೆ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಿಬ್ಬಂದಿ ಪ್ರಾಣ ಪಣಪಟ್ಟು ದುಡಿಯುತ್ತಿದ್ದಾರೆ. ಕರೊನಾ ಸೇನಾನಿಗಳಿಗೆ ನಾವೆಲ್ಲ ಅಭಾರಿಯಾಗಿರಬೇಕು ಎಂದು ಸಚಿವ ಎಂಟಿಬಿ ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಮು, ಕೃಷಿ ಮೋರ್ಚಾ ಅಧ್ಯಕ್ಷ ಕೆ.ನಾಗೇಶ್, ಶಿವನಪುರ ಗ್ರಾಪಂ ಅಧ್ಯಕ್ಷ ಕೆ.ಸಿ ನಾರಾಯಣಪ್ಪ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಮತ್ತಿತರರಿದ್ದರು.