ಸೆ.3 ರಂದು ಮಾನ್ಸೂನ್ ಹಾಫ್ ಮ್ಯಾರಥಾನ್

Published on

ಗೋಣಿಕೊಪ್ಪ: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಕ್ಯಾಲ್ಸ್ ಶಾಲೆ ಹಾಗೂ ಎನ್‌ಇಬಿ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಸಹಯೋಗದಲ್ಲಿ ಸೆ.22ರಂದು 3ನೇ ವರ್ಷದ ರಾಷ್ಟ್ರ ಮಟ್ಟದ ಮಾನ್ಸೂನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ನಿರ್ದೇಶಕಿ ಅಶ್ವಿನಿ ನಾಚಪ್ಪ ತಿಳಿಸಿದ್ದಾರೆ.

ಸುಮಾರು 3 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸ್ಥಳೀಯರಿಗಾಗಿ ವಿಶೇಷವಾಗಿ ಆಯೋಜಿಸಿರುವ 5 ಕಿ. ಮೀ. ವಿಭಾಗಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲೆ ಆವರಣದಿಂದ ಪಾಲಿಬೆಟ್ಟ ಗಾಲ್ಫ್ ಮೈದಾನದವರೆಗೆ ನಡೆಯಲಿದ್ದು, 21.1 ಕಿ.ಮೀ., 10 ಕಿ.ಮೀ. ಮತ್ತು 5 ಕಿ.ಮೀ. ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 21.1 ಮತ್ತು 10 ಕಿ.ಮೀ. ವಿಭಾಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. 5 ಕಿ.ಮೀ. ಮಜಾ ರನ್ ವಿಭಾಗವು ಸ್ಥಳೀಯರನ್ನು ಪ್ರೋತ್ಸಾಹಿಸಲು ಆಯೋಜಿಸಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಕ್ಯಾಲ್ಸ್ ಶಾಲೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಬೆಳಗ್ಗೆ 6 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಸ್ಪರ್ಧಿಗಳಿಗೆ ಟಿ-ಶರ್ಟ್, ಮೆಡಲ್ಸ್ ಮತ್ತು ಉಪಾಹಾರ ನೀಡಲಾಗುತ್ತದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಅಮ್ಮಂಡೀರ ಚೇತನ್ ಇದ್ದರು. ಹೆಸರು ನೋಂದಣಿಗೆ ಮೊ: 9019907806, 9019907808 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net