ಷರತ್ತಿನ ಅನ್ವಯ ವ್ಯಾಪಾರ-ವಹಿವಾಟು ನಡೆಸಿ

02 HANUR 4
Published on

ಹನೂರು: ಮಳಿಗೆಗಳ ಬಾಡಿಗೆದಾರರು ಹಾಗೂ ವ್ಯಾಪಾರಸ್ಥರು ಪ್ರಾಧಿಕಾರ ನಿಗದಿಪಡಿಸಿರುವ ಷರತ್ತಿನ ಅನ್ವಯ ವ್ಯಾಪಾರ ನಡೆಸಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸೂಚಿಸಿದರು.

ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮ.ಬೆಟ್ಟವನ್ನು ಈಗಾಗಲೇ ಪ್ಲಾಸ್ಟಿಕ್ ಮುಕ್ತ ವಲಯವಾಗಿ ಘೋಷಿಸಲಾಗಿದೆ. ಆದರೆ ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ನಿಷೇಧವಿದ್ದರೂ ಕೆಲವು ಅಂಗಡಿಗಳಲ್ಲಿ ತಂಬಾಕು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಸಹ ಗಮನಕ್ಕೆ ಬಂದಿದೆ. ಪರಿಣಾಮ ಮ.ಬೆಟ್ಟದ ಪಾವಿತ್ರತ್ಯೆಗೆ ಧಕ್ಕೆಯಾಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಪ್ರಾಧಿಕಾರ ನಿಗದಿಪಡಿಸಿರುವ ಷರತ್ತಿಗೆ ಅನುಗುಣವಾಗಿ ವ್ಯಾಪಾರ ವಹಿವಾಟು ನಡೆಸಬೇಕು. ಇಲ್ಲವಾದಲ್ಲಿ ಅನುಮತಿ ರದ್ದುಗೊಳಿಸಲಾಗುವುದು. ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರಾಧಿಕಾರದ ಜತೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ಒಂದು ವೇಳೆ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಈ ಬಗ್ಗೆ ಒಟ್ಟಾಗಿ ಬಗೆಹರಿಸಲು ಶ್ರಮಿಸೋಣ ಎಂದು ತಿಳಿಸಿದರು.

ಸಭೆಗೂ ಮುನ್ನ ಸರಸ್ವತಿ ಅವರು ರಂಗಮಂದಿರ ಹಾಗೂ ದೇಗುಲದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಮಳೆ ನೀರು ನಿಲ್ಲದಂತೆ ಕ್ರಮವಹಿಸಬೇಕು. ಅಲ್ಲಲ್ಲಿ ಕಸದ ಬುಟ್ಟಿ ಇಡುವುದರ ಮೂಲಕ ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಬೇಕು. ದನಕರುಗಳು ಒಳ ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ದೇಗುಲದ ಮುಂಭಾಗದ ಕಬ್ಬಿಣದ ಸಲಾಕೆಯ ಗೋಡೆಗಳಲ್ಲಿ ಭಕ್ತರು ಬಟ್ಟೆ ಒಣ ಹಾಕದಂತೆ ಅಗತ್ಯ ಕ್ರಮವಹಿಸಬೇಕು. ಪ್ಲಾಸ್ಟಿಕ್ ಹಾಗೂ ತಂಬಾಕು ನಿಷೇಧದ ಬಗ್ಗೆ ನಾಮಫಲಕ ಅಳವಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜೇನುಮಲೆ ಭವನಕ್ಕೆ ಭೇಟಿ ನೀಡಿದ ಅವರು, ಕೊಠಡಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ದಾಸೋಹ ಭವನ ಹಾಗೂ ಲಾಡು ತಯಾರಿಕ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಶುಚಿತ್ವ ಕಾಪಾಡುವುದರ ಜತೆಗೆ ರುಚಿ, ಶುಚಿಯಿಂದ ಕೂಡಿರುವ ಗುಣಮಟ್ಟದ ಪ್ರಸಾದವನ್ನು ವಿತರಿಸಬೇಕು ಎಂದು ಸೂಚಿಸಿದರು. ನಂತರ ಒಳ ಚರಂಡಿ ಘಟಕ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್, ಎಸ್‌ಡಿಎ ಮಹದೇವಸ್ವಾಮಿ, ನೌಕರರಾದ ನಾಗರಾಜು, ಜನಾರ್ದನ್ ಶಾಸ್ತ್ರಿ, ಲಾಡು ವಿಭಾಗದ ಮಹದೇವಸ್ವಾಮಿ, ಪಿಡಿಒ ಕಿರಣ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net