ಷಟ್ಪಥ ಕಾಮಗಾರಿ ಭೂಮಿಪೂಜೆಗೆ ಗಡ್ಕರಿ

24BGV1
ಬೆಳಗಾವಿ ನಗರದ ಕಾಡಾ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ ಮಾತನಾಡಿದರು. ಶಾಸಕ ಅಭಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇದ್ದರು.
Published on

ಬೆಳಗಾವಿ: ಬೆಳಗಾವಿ-ಸಂಕೇಶ್ವರ ಬೈಪಾಸ್ ರಸ್ತೆ ಸೇರಿದಂತೆ 3,972 ಕೋಟಿ ರೂ. ವೆಚ್ಚದ 238 ಕಿ.ಮೀ. ಉದ್ದದ ಐದು ರಾಷ್ಟ್ರೀಯ ಹೆದ್ದಾರಿಯ ಷಟ್ಪಥ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಫೆ. 28ರಂದು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಸಂಸದೆ ಮಂಗಲ ಅಂಗಡಿ ಮಾಹಿತಿ ನೀಡಿದರು.ನಗರದ ಕಾಡಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಷಟ್ಪಥ ರಸ್ತೆಗಳಾದ 1,479 ಕೋಟಿ ರೂ. ವೆಚ್ಚದ ಬೆಳಗಾವಿ-ಸಂಕೇಶ್ವರ ಬೈಪಾಸ್ (40 ಕಿ.ಮೀ.), 1,388 ಕೋಟಿ ರೂ. ವೆಚ್ಚದ ಸಂಕೇಶ್ವರದಿಂದ ಮಹಾರಾಷ್ಟ್ರ ಗಡಿ (37.83 ಕಿ.ಮೀ.), 246.78 ಕೋಟಿ ರೂ. ವೆಚ್ಚದ ಸಂಕಲೀಂ- ಜಾಂಬೋಟಿ (69 ಕಿ.ಮೀ.), 246.78 ಕೋಟಿ ರೂ. ವೆಚ್ಚದ ವಿಜಯಪುರ-ಮುರಗುಂಡಿ (80 ಕಿ.ಮೀ.), 90.13 ಕೋಟಿ ರೂ. ವೆಚ್ಚದ ವಿಜಯಪುರ- ಸಿದ್ದಾಪುರ (11.62 ಕಿ.ಮೀ.) ರಸ್ತೆ ಸೇರಿದಂತೆ ಒಟ್ಟು 238 ಕಿ.ಮೀ. ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಬೆಂಗಳೂರು-ಪುನಾ ರಾಷ್ಟ್ರೀಯ ಹೆದ್ದಾರಿ ಚತುಷ್ಪಥದಿಂದ ಷಟ್ಪಥ ಕಾಮಗಾರಿ ಪ್ರಗತಿ ಹಂತದಲ್ಲಿದೆ. ರಸ್ತೆ ಸೌಕರ್ಯದಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನುಕೂಲವಾಗಿದೆ ಎಂದರು.

ಪಕ್ಷದ ತೀರ್ಮಾನಕ್ಕೆ ಬದ್ಧ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಲ್ಕೈದು ಬಾರಿ ಭೇಟಿ ಮಾಡಿದ್ದೇವೆ. ಅಧಿವೇಶನದ ಒಳಗಾಗಿಯೇ ಆಯ್ಕೆ ಮಾಡುವಂತೆ ವಿನಂತಿಯನ್ನೂ ಮಾಡಲಾಗಿದೆ. ಮೇಯರ್ ಸ್ಥಾನದ ವಿಷಯದಲ್ಲಿ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ರಿಂಗ್ ರೋಡ್ ಕಾಮಗಾರಿ

ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ನಗರದ ಹೊರ ವಲಯದಲ್ಲಿ 65 ಕಿ.ಮೀ. ಉದ್ದದ ರಿಂಗ್ ರೋಡ್‌ಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ, ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟಿದ್ದು, ಕಾಮಗಾರಿ ಆರಂಭಗೊಂಡಿದೆ. ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಸುವರ್ಣ ವಿಧಾನಸೌಧದಿಂದ ಸಾಂಬ್ರಾ ವಿಮಾನ ನಿಲ್ದಾಣದ ವರೆಗೆ ರಸ್ತೆ ನಿರ್ಮಾಣ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಎಂದರು.

ಐಟಿ ಪಾರ್ಕ್ ನಿರ್ಮಾಣಕ್ಕೆ ಒತ್ತಡ

ಬೆಳಗಾವಿಯ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 775 ಎಕರೆ ಭೂಮಿ ರಕ್ಷಣಾ ಇಲಾಖೆ ಅಧೀನದಲ್ಲಿದೆ. ಈ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಲು ಭೂಮಿ ಬಿಟ್ಟುಕೊಡುವಂತೆ 2008ರಿಂದ ಹೋರಾಟ ಮಾಡಲಾಗುತ್ತಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾಗಿದ್ದ ಸುರೇಶ ಅಂಗಡಿ ಅವರು ರಕ್ಷಣಾ ಇಲಾಖೆಗೆ ನಾಲ್ಕೈದು ಬಾರಿ ಪತ್ರ ಬರೆದಿದ್ದಾರೆ. ಆದರೆ, ಇಲ್ಲಿಯವರೆಗೆ ಸ್ಪಂದಿಸಿಲ್ಲ. ಅಲ್ಲದೆ, ಆ ಭೂಮಿಯ ಅಧಿಕೃತ ದಾಖಲೆಯೂ ರಕ್ಷಣಾ ಇಲಾಖೆಯವರ ಬಳಿ ಇಲ್ಲ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದು ಬಜೆಟ್‌ನಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಅನುದಾನ ಮೀಸಲಿಡಲು ಒತ್ತಾಯಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರ ಒಪ್ಪಿಗೆ ಪಡೆದುಕೊಂಡ ಬಳಿಕವೇ ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ವಿಷಯದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ.| ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net