ಶ್ವಾಸಕೋಶ ಕ್ಯಾನ್ಸರ್ ಜಾಗೃತಿ 23ರಿಂದ

HCG
Published on

ಕಲಬುರಗಿ: ಶ್ವಾಸಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿ ಜತೆಗೆ ಉಚಿತ ತಪಾಸಣಾ ಶಿಬಿರವನ್ನು 23ರಿಂದ 30ರವರೆಗೆ ಆಯೋಜಿಸಲಾಗಿದೆ ಎಂದು ಕಲಬುರಗಿ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಶಾಂತಲಿಂಗ ನಿಗ್ಗುಡಗಿ, ಡಾ.ನಂದೀಶಕುಮಾರ ಜೀವಣಗಿ ತಿಳಿಸಿದರು.
ಕಲಬುರಗಿ ಹವಾಮಾನ ದಿನೇದಿನೆ ಕುಸಿಯುತ್ತಿದೆ. ರಸ್ತೆ ಕಾಮಗಾರಿ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಧೂಮಪಾನದಿಂದಾಗಿ ಪ್ರತಿ ಹತ್ತು ಜನರಲ್ಲಿ ಆರು ಮಂದಿಗೆ ಶ್ವಾಸಕೋಶ ಕ್ಯಾನ್ಸರ್ ಬರುತ್ತಿದೆ. ಆರಂಭಿಕ ಹಂತದಲ್ಲಿದ್ದರೆ ಗುಣಪಡಿಸಲು ಸಾಧ್ಯವಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ಯಾನ್ಸರ್ಗಿಂತ ಭಯವೇ ಅಪಾಯಕಾರಿ. ಇದನ್ನು ದೂರ ಮಾಡಲು ಶಿಬಿರ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಗೂ ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್ ಲಕ್ಷಣ ಕಾಣಿಸಬಹುದು. ಶ್ವಾಸಕೋಶ ಕ್ಯಾನ್ಸರ್ ಧೂಮಪಾನದಿಂದ ಬರುತ್ತದೆ ಎಂದು ಎಲ್ಲರಿಗೂ ತಿಳಿದ ಸಂಗತಿ. ಜತೆಗೆ ಇತರ ಕಾರಣಗಳೂ ಇರಲಿವೆ ಎಂದರು.
ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದವರು ವಯಸ್ಸಾದ ನಂತರ ಮಾರಕ ಕಾಯಿಲೆಗಳಿಗೆ ಗುರಿಯಾದರೆ, ಕೆಲವರು ಚಿಕ್ಕ ವಯಸ್ಸಿನಲ್ಲೇ ಕಾಯಿಲೆಯಿಂದ ನರಕ ಅನುಭವಿಸುವಂತಾಗುತ್ತದೆ. ಈ ಪೈಕಿ ಶ್ವಾಸಕೋಶ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದೆ. ರೋಗಲಕ್ಷಣ ಕುರಿತು ಶಿಬಿರದಲ್ಲಿ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಶೇ.30-40 ಜನರಲ್ಲಿ ಶ್ವಾಸಕೋಶ ಕ್ಯಾನ್ಸರ್ನ ಕೆಲ ಲಕ್ಷಣ ಕಾಣಿಸುತ್ತವೆ. ಹೆಚ್ಚಾಗಿ ಲೀವರ್, ಮೂತ್ರಜನಕಾಂಗದ ಗ್ರಂಥಿ, ಮೂಳೆ ಮತ್ತು ಮೆದುಳಿಗೆ ಹಬ್ಬುವುದು, ಹಸಿವು ಕಡಿಮೆ, ಊಟ ಮಾಡಲು ಆರಂಭಿಸಿದ ತಕ್ಷಣ ಹೊಟ್ಟೆ ತುಂಬುವುದು ಮತ್ತು ಅನಿರೀಕ್ಷಿತ ತೂಕ ಕಳೆದುಕೊಳ್ಳುವುದು. ಸಣ್ಣದಾಗಿ ಇರುವ ಕೆಮ್ಮು ಇದ್ದಕ್ಕಿದ್ದಂತೆ ಹೆಚ್ಚಾಗುವುದು, ಕೆಮ್ಮುವಾಗ ಕಫ, ರಕ್ತ ಬೀಳುವುದು, ಉಸಿರಾಡುವಾಗ, ಕೆಮ್ಮುವಾಗ ಅಥವಾ ನಗುವಾಗ ಎದೆನೋವು, ದಮ್ಮು, ಆಯಾಸ ಸೇರಿ ಅನೇಕ ಲಕ್ಷಣಗಳು ಕಾಣಿಸಿಕೊಳ್ಳಲಿವೆ ಎಂದು ತಿಳಿಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net