ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಕೆ

01THHUSKEYCHIP
Published on

ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ಪಶು ಆಸ್ಪತ್ರೆಯಲ್ಲಿ ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಶನಿವಾರ ಆಯೋಜಿಸಿದ್ದ ವಿವಿಧ ತಳಿಯ ಶ್ವಾನಗಳ ನೋಂದಣಿ ಹಾಗೂ ಮೈಕ್ರೋಚಿಪ್ ಅಳವಡಿಸುವ ಒಂದು ದಿನದ ಅಭಿಯಾನದಲ್ಲಿ 60ಕ್ಕೂ ಹೆಚ್ಚು ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸಲಾಯಿತು.


ಗೋಲ್ಡನ್ ರಿಟ್ರೀವರ್, ಜರ್ಮನ್ ಶೆಫರ್ಡ್‌, ಚೌಚೌ ಸೇರಿದಂತೆ ಬೆಲೆಬಾಳುವ ವಿವಿಧ ತಳಿಗಳ ಶ್ವಾನಗಳನ್ನು ಅವುಗಳ ಮಾಲೀಕರು ಕರೆ ತಂದು ನೋಂದಣಿ ಮಾಡಿಸಿ, ಮೈಕ್ರೋಚಿಪ್ ಅಳವಡಿಸಿಕೊಂಡರು.


ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್ ಮಾತನಾಡಿ, ಮೈಕ್ರೋ ಚಿಪ್ ಅಳವಡಿಸಿದರೆ ಶ್ವಾನಗಳು ಕಳೆದು ಹೋದಾಗ ಹುಡುಕಲು ನೆರವಾಗುತ್ತದೆ. ಸ್ಕ್ಯಾನರ್‌ನಲ್ಲಿ ಸ್ಕ್ಯಾನ್ ಮಾಡಿದಾಗ ಚಿಪ್ ನಂಬರ್ ಕಾಣುವುದರಿಂದ ಶ್ವಾನಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ನೋಂದಣಿ ಮಾಡಿದ ಶ್ವಾನಗಳ ಮಾಲೀಕರಿಗೆ ಕೆನೈನ್ ಕ್ಲಬ್ ಆಫ್ ಇಂಡಿಯಾ ಘಟಕದಿಂದ ಒಂದು ವರ್ಷ ಶ್ವಾನಗಳ ಪಾಲನೆಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತದೆ. ಜನವರಿಯಲ್ಲಿ ನಡೆಯುವ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದೆ. ದೇಶದಲ್ಲಿ ಇತ್ತೀಚೆಗೆ ನಡೆಯುವ ‘ಡಾಗ್ ಶೋನಲ್ಲಿ ಪಾಲ್ಗೊಳ್ಳುವ ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಕೆ ಕಡ್ಡಾಯಗೊಳಿಸಿರುವುದರಿಂದ ಈ ಅಭಿಯಾನ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.


ಪಶುವೈದ್ಯರಾದ ಡಾ.ಸಂಜೀವಮೂರ್ತಿ, ಡಾ.ಅರುಣ್, ಡಾ.ಜಯರಾಮಯ್ಯ, ಸಂಸ್ಥೆಯ ಪದಾಧಿಕಾರಿಗಳಾದ ವಿನೋದ್, ಅಭಿಷೇಕ್ ಹೆಗಡೆ, ಸಂಜಯ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net