

ಹಾಸನ: ಜಿಲ್ಲೆಯಲ್ಲಿ ಹೆಸರಾಂತ ಪಾರಂಪರಿಕ ವೈದ್ಯರಾಗಿದ್ದ ವೈದ್ಯ ಸತ್ಯನಾರಾಯಣ ಶ್ರೇಷ್ಠಿ ಅವರ ಅಗಲಿಕೆಯಿಂದ ಪಾರಂಪರಿಕ ವೈದ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ವಿಷಾದ ವ್ಯಕ್ತಪಡಿಸಿದರು.
ನಗರದ ಹಾಸನಾಂಬಾ ದೇವಾಲಯದ ಸಮೀಪ ಇರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ವೈದ್ಯರತ್ನ ವೈದ್ಯ ಸತ್ಯನಾರಾಯಣ ಶ್ರೇಷ್ಠಿ ಅವರ ವೈಕುಂಠ ಸಮಾರಾಧನ ಪ್ರಯುಕ್ತ ಕುಟುಂಬಸ್ಥರು ಶನಿವಾರ ಆಯೋಜಿಸಿದ್ದ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಉದ್ದೇಶಿಸಿ ಮಾತನಾಡಿದ ಅವರು, 92 ವರ್ಷ ಬದುಕಿ ಬಾಳಿದ ಹಾಸನ ಜಿಲ್ಲೆಯಲ್ಲಿ ಹೆಸರಾದಂತ ಪಾರಂಪರಿಕ ವೈದ್ಯರಾಗಿದ್ದ ಸತ್ಯನಾರಾಯಣ ಶ್ರೇಷ್ಠಿ ವಂಶ ಪಾರಂಪರ್ಯವಾಗಿ ಬಳುವಳಿಯಾಗಿ ಬಂದಿದ್ದ ವೈದ್ಯ ಸೇವೆಯನ್ನು ಮಾಡುವುದರ ಜತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಜಾಂಡೀಸ್ ಕಾಯಿಲೆ ಬಂದ ರೋಗಿಗಳು ಇವರ ಹತ್ತಿರ ಚಿಕಿತ್ಸೆ ಪಡೆದು ಗುಣಮುಖರಾಗಿ ಸುಖಕರ ಜೀವನ ನಡೆಸುತ್ತಿದ್ದಾರೆ. ಆಧುನಿಕ ಚಿಕಿತ್ಸಾ ಪದ್ಧತಿ ಇದ್ದರೂ ಶ್ರೇಷ್ಠಿ ಅವರು ನೀಡುತ್ತಿದ್ದ ಔಷಧವನ್ನು ಪಡೆಯಲು ಜನರು ತಂಡೋಪತಂಡವಾಗಿ ಬರುತ್ತಿದ್ದರು. ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಪಾರಂಪರಿಕ ವೈದ್ಯ ಪರಿಷತ್ 2018ನೇ ಸಾಲಿನಲ್ಲಿ ದಾವಣಗೆರೆಯಲ್ಲಿ ನಡೆದ ಪಾರಂಪರಿಕ ವೈದ್ಯರ ರಾಜ್ಯ ಮತ್ತು ರಾಷ್ಟ್ರೀಯ ಸಮ್ಮೇಳನ ಸಂದರ್ಭದಲ್ಲಿ ಶ್ರೇಷ್ಠಿ ಅವರಿಗೆ ‘ಪಾರಂಪರಿಕ ವೈದ್ಯ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇವರ ಮಕ್ಕಳಾದ ಬಿ.ಎಸ್. ಶ್ರೀಕಂಠ ಗುಪ್ತ, ಬಿ.ಎಸ್. ರಾಮ್ ಪ್ರಸಾದ್ ಮತ್ತು ಬಿ.ಎಸ್. ವಿಶ್ವನಾಥ್ ಅವರು ಈ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇವರ ಆದರ್ಶಗಳು ಮತ್ತು ಚಿಕಿತ್ಸೆ ವಿಧಾನ ಕುರಿತು ಕುಟುಂಬಸ್ಥರ ಸಹಕಾರದೊಂದಿಗೆ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಂಡಳಿ ಅಧ್ಯಕ್ಷ ಬಿ.ಎಚ್. ವಿಶ್ವನಾಥ ಶ್ರೇಷ್ಠಿ, ಸಮಾಜ ಸೇವಕ ಎಸ್‌ಆರ್‌ಎಸ್ ರಾಜಣ್ಣ, ಪರಿಷತ್ ಹಾಸನ ಘಟಕದ ಅಧ್ಯಕ್ಷ ರುದ್ರಯ್ಯ, ವೈದ್ಯರಾದ ಬಿ.ಎಸ್. ವಿಶ್ವನಾಥ್, ನಂದಕುಮಾರ್, ಸೋಮೇಗೌಡ, ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಾಂಧವರು ಭಾಗವಹಿಸಿದ್ದರು.