

ಮೈಸೂರು: ನೃತ್ಯಗಿರಿ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ವೀಣೆ ಶೇಷಣ್ಣ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೃತ್ಯಸಪ್ತಾಹ, ಗುರುವಂದನಾ ಕಾರ್ಯಕ್ರಮದಲ್ಲಿ ಸಿ.ಎಸ್. ಶ್ರೇಯಾ ಭರತನಾಟ್ಯ ರಂಗಪ್ರವೇಶ ಮಾಡಿದರು.
ಸಮೀಕ್ಷಾ ಅವರ ನಟುವಾಂಗ, ವಿದ್ವಾನ್ ರೋಹಿತ್ ಭಟ್ ಅವರ ಹಾಡುಗಾರಿಕೆ, ವಿದ್ವಾನ್ ಲಿಂಗರಾಜು ಅವರ ಮೃದಂಗ ಮತ್ತು ಎಪಿ ಕೃಷ್ಣಪ್ರಸಾದ್ ಅವರ ಕೊಳಲು ನೃತ್ಯಕ್ಕೆ ಮೆರುಗು ನೀಡಿತು.
ಸರಸ್ವತಿ ರಾಗದ ಆದಿತಾಳದಲ್ಲಿನ ಪುಷ್ಪಾಂಜಲಿಯನ್ನು ಪ್ರಸ್ತುತಪಡಿಸಿದ ನಂತರ ಗೌಡರಾಗ ಏಕತಾಳದಲ್ಲಿನ ಷಣ್ಮುಖೌತ್ವಂ ಪ್ರಸ್ತುತಪಡಿಸಲಾಯಿತು. ನಂತರ ವೀಣಾ ಶೇಷಯ್ಯ ಅವರ ದೇವಾದಿ ದೇವಾ ಎಂಬ ಪದವರ್ಣಕ್ಕೆ ಶ್ರೇಯಾ ನೃತ್ಯ ಪ್ರಸ್ತುತಪಡಿಸಿದರು. ಪುರಂದರದಾಸರ ಹಂಸಾನಂದಿ ರಾಗದ ಹರಿ ಆಡಿಸಿದನು ದೇವರ ನಾಮಕ್ಕೆ ನೃತ್ಯ ಪ್ರಸ್ತುತಪಡಿಸಲಾಯಿತು. ಹಿಂದೋಳರಾಗದ ತಿಲಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಮೈಸೂರು ವಿ.ವಿ. ಲಲಿತಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಆದ ವಿದ್ವಾಂಸ ಆರ್.ಎನ್.ಶ್ರೀಲತಾ, ತಾಳವಾದ್ಯ ವಿದ್ವಾಂಸ ಜಿ. ಎಸ್.ರಾಮಾನುಜಂ ಪಾಲ್ಗೊಂಡಿದ್ದರು.