ಶ್ರೇಯಸ್ ಪರ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಮನೆ ಮನೆ ಪ್ರಚಾರ

ಶ್ರೇಯಸ್ ಪರ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಮನೆ ಮನೆ ಪ್ರಚಾರ
Published on

ಹಾಸನ: ನಗರದ ಕೆ. ಹೊಸಕೊಪ್ಪಲು ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಮತ ಯಾಚನೆಗೆ ಚಾಲನೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್ , ಬಾಗೂರು ಮಂಜೇಗೌಡ ಸೇರಿದಂತೆ ಅನೇಕ ಮುಖಂಡರು ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮನೆ ಮನೆಗೆ ಕರ ಪತ್ರಗಳನ್ನು ವಿತರಿಸುವ ಮೂಲಕ ಮತ ಯಾಚನೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಹಾಸನ ನಗರ ವ್ಯಾಪ್ತಿಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಶ್ರೇಯಸ್ ಪರ ಮತ ಯಾಚನೆಗೆ ಮುಂದಾಗಿದ್ದೇವೆ. ಐದು ಜನಪರ ಯೋಜನೆಗಳನ್ನು ನೀಡುವ ಮೂಲಕ ಜನಪರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶದ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ನೀಡಲು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಎಲ್ಲಾ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಕೂಡ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಸಾಲ ಮನ್ನಾ, ಉದ್ಯೋಗ ಸೃಷ್ಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಿದೆ. ಅವುಗಳ ಜಾರಿಗೆ ತರಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಮತದಾನ ಮಾಡುವ ಮೂಲಕ ಬೆಂಬಲ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಮಾತನಾಡಿ, ಹಾಸನ ನಗರದ ಹೊಸಕೊಪ್ಪಲು, ಚನ್ನಪಟ್ಟಣ, ನಾಗತವಹಳ್ಳಿ ಸೇರಿದಂತೆ ವಿವಿಧೆಡೆ ನಮ್ಮ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ, ಬಡವರ, ದೀನ- ದಲಿತರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬಿದಂತೆ ಆಗುತ್ತದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಇರುವ ಅನೇಕ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ಧಿಗೆ ಶ್ರೇಯಸ್ ಪಟೇಲ್ ಸೂಕ್ತ ವ್ಯಕ್ತಿ ಆಗಿದ್ದಾರೆ. ಕ್ಷೇತ್ರದ ಜನರು ಈ ಬಾರಿ ಶ್ರೇಯಸ್ ಪಟೇಲ್ ಕೈ ಹಿಡಿಯುವ ಮೂಲಕ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಹಿಡಿಯಲು ಅನುವು ಮಾಡಿಕೊಂಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net