

ಗಂಡಸಿ: ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಾಗರಹಳ್ಳಿ ಈಗ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಬದಲಾಗುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಾಗರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಹೋಬಳಿಯ ಮಗ ಶಿವಲಿಂಗೇಗೌಡ. ಸಿದ್ದರಾಮಯ್ಯನವರ ಮಂತ್ರಿಮಂಡಲದಲ್ಲಿ ಮಂತ್ರಿ ಆಗಲೇಬೇಕು ಎಂಬ ಅಭಿಲಾಷೆ ನಿಮ್ಮಲ್ಲಿ ಇದ್ದರೆ ಗಂಡಸಿ ಹೋಬಳಿಯ ಮತದಾರ ಬಂಧುಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯುವ ರಾಜಕಾರಣಿ ಶ್ರೇಯಸ್ ಪಟೇಲ್ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನನ್ನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಇಡೀ ಕರ್ನಾಟಕದ ಜನತೆ ನನ್ನನ್ನು ಗುರುತಿಸಿದೆ. ಆದರೆ ಮೂರು ಬಾರಿ ಶಾಸಕನಾಗಿ ಆಯ್ಕೆಯಾದರೂ ಜೆಡಿಎಸ್ ಪಕ್ಷದ ಮುಖಂಡರು ನನ್ನನ್ನು ಗುರುತಿಸಲಿಲ್ಲ. ಒಂದು ಸಣ್ಣ-ಪುಟ್ಟ ಹುದ್ದೆಯನ್ನು ನೀಡದೆ ಅವಮಾನಿಸಿದರು. ಹೀಗಾಗಿ ನಾನು ಜೆಡಿಎಸ್ ಪಕ್ಷ ತೊರೆಯಬೇಕಾಯಿತು. ಈಗ ಯಾರ ಹಂಗೂ ಇಲ್ಲದೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕೆಲ ಮುಖಂಡರು ಶಾಸಕ ಶಿವಲಿಂಗೇಗೌಡ ಹಾಗೂ ಶ್ರೇಯಸ್ ಪಟೇಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೃಷ್ಣೇಗೌಡ, ಜಿ.ಎನ್. ದೇವೇಗೌಡ, ನಾಗರಾಜು, ವೆಂಕಟೇಶ್, ಕೋಳಿ ಅಂಗಡಿ ಗಿರಿ, ಆಗ್ರೋ ಬಾಬು, ಜೈರಾಮ್, ಜಟ್ಟಿ ಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.