

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜ.6 ರಿಂದ 10 ರವರೆಗೆ ಐದು ದಿನಗಳವರೆಗೆ ನಡೆಯಲಿರುವ ಶ್ರೀಸಿದ್ದಪ್ಪಾಜಿ ಜಾತ್ರೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಡಿವೈಎಸ್ಪಿ ಜಿ.ಯು. ಸೋಮೇಗೌಡ ಹಾಗೂ ಪಿಎಸ್‌ಐ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಜತೆಗೆ ಚಿಕ್ಕಲ್ಲೂರಿನಲ್ಲಿರುವ ಹೊಸ ಮಠ ಹಾಗೂ ಹಳೇ ಮಠಕ್ಕೆ ಭೇಟಿ ನೀಡಿ ಜಾತ್ರೆಯ ಪೂರ್ವಸಿದ್ಧತೆ ಪರಿಶೀಲಿಸಿದರು.
ಭೇಟಿ ವೇಳೆ ಶ್ರೀ ಚಿಕ್ಕಲ್ಕೂರು ಸಿದ್ದಪ್ಪಾಜಿ ದೇವಾಲಯದ ಭರತರಾಜೇ ಅರಸ್ ಜತೆ ಕೆಲಕಾಲ ಸಮಾಲೋಚನೆ ನಡೆಸಿ ಜಾತ್ರೆಗೆ ಭಕ್ತರಿಗೆ ಅಗತ್ಯವಿರುವ ನೀರಿನ ಸೌಲಭ್ಯ, ಸ್ನಾನಗೃಹ, ಶೌಚಗೃಹ ಇನ್ನಿತರ ಸೌಲಭ್ಯಗಳ ಮಾಹಿತಿ ಪಡೆದರು. ಕರೊನಾ ಎದುರಾಗುತ್ತಿರುವ ಕಾರಣ ದೇವಾಲಯದ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜಾತ್ರೆಗೆ ಬರುವ ವಾಹನಗಳ ಪಾರ್ಕಿಂಗ್ ಹಾಗೂ ವ್ಯವಸ್ಥಿತ ರಸ್ತೆ ಸಂಚಾರಕ್ಕೆ ಏನೆಲ್ಲ ಕ್ರಮವಹಿಸಬೇಕು, ದೇವಾಲಯ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಸಂಬಂಧ ಕಟ್ಟುನಿಟ್ಟಿನ ಪೊಲೀಸ್ ಕಣ್ಗಾವಲು ಹಾಗೂ ಎಲ್ಲೆಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕೆಂಬುದರ ಬಗ್ಗೆ ಕಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಭಕ್ತರಿಗೆ ದೇವರ ದರ್ಶನ ಮಾಡಲು ಸರಿಯಾದ ವ್ಯವಸ್ಥೆ ಹಾಗೂ ಚಿಕ್ಕಲ್ಲೂರಿನಲ್ಲಿ ಜಾತ್ರೆಯ ವೇಳೆ ಕಾನೂನು ಸುವ್ಯವಸ್ಥೆಗೆ ಅಡಚಣೆಯಾಗದಂತೆ ಏನೆಲ್ಲ ಕ್ರಮ ವಹಿಸಬೇಕಾದ ಬಗ್ಗೆ ಅಧಿಕಾರಿಗಳಿಗೆ ಎಸ್ಪಿ ಶಿವಕುಮಾರ್ ಸೂಚನೆ ನೀಡಿದರು.
ಭಕ್ತರು ಸಂಖ್ಯೆ ಜಾತ್ರೆಗೆ ಹೆಚ್ಚಾಗುವುದರಿಂದ ಬಂದೋಬಸ್ತ್ ವ್ಯವಸ್ಥೆಯು ಸಮರ್ಪಕವಾಗಿಸಲು ಕ್ರಮವಹಿಸಲಾಗುತ್ತಿದ್ದು, ಈ ಬಾರಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ನಿರೀಕ್ಷೆ ಇದೆ.
ದೇವರ ದರ್ಶನ: ಭೇಟಿ ವೇಳೆ ಶ್ರೀ ಸಿದ್ದಪ್ಪಾಜಿ ದೇವರ ದರ್ಶನ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಗೆ ಜಾತ್ರೆಗೆ ಬಂದ ಭಕ್ತರಿಗೆ ಯಾವುದೇ ಗೊಂದಲ ಉಂಟಾಗದ ರೀತಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಜಿ.ಯು. ಸೋಮೇಗೌಡ ವಿಜಯವಾಣಿಯೊಂದಿಗೆ ಮಾತನಾಡಿ, ಜಿಲ್ಲಾ ಎಸ್ಪಿ ಟಿ.ಪಿ. ಶಿವಕುಮಾರ್ ಚಿಕ್ಕಲ್ಲೂರು ಜಾತ್ರಾ ಸಂಬಂಧ ಶ್ರೀ ಸಿದ್ದಪ್ಪಾಜಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಪೊಲೀಸ್ ಬಂದೋಬಸ್ತ್‌ಗೆ ಬೇಕಾದ ವ್ಯವಸ್ಥೆ ಸಂಪೂರ್ಣವಾಗಲಿದ್ದು, ಚೆಕ್‌ಪೋಸ್ಟ್ ಹಾಗೂ ಪೊಲೀಸ್ ನಿಯೋಜನೆ ಪಟ್ಟಿ ತಯಾರಾಗುತ್ತದೆ ಎಂದರು.