ಶ್ರೀಸಾಮಾನ್ಯನಿಗೆ ಸಿಗದ ಶಿಕ್ಷಣ, ಆರೋಗ್ಯ ಸೌಲಭ್ಯ

06tnpnewsfile01
ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಆಮ್ ಆದ್ಮಿ ಪಕ್ಷದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿ ಸೋಸಲೆ ಸಿದ್ದರಾಜು ಪಕ್ಷಕ್ಕೆ ಸೇರ್ಪಡೆಯಾದರು. ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಪ್ರೊ.ನಂಜೇರಾಜೇ ಅರಸ್ ಇತರರಿದ್ದರು.
Published on

ತಿ.ನರಸೀಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳಾಗಿದ್ದರೂ ಇದುವರೆವಿಗೂ ಆಡಳಿತ ನಡೆಸಿದ ಸರ್ಕಾರಗಳಿಂದ ರಸ್ತೆ, ಚರಂಡಿ ಅಭಿವೃದ್ಧಿಗೊಂಡಿವೆಯೇ ಹೊರತು ಜನರ ಬದುಕು ಅಭಿವೃದ್ಧಿಯಾಗಲಿಲ್ಲ. ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಶ್ರೀ ಸಾಮಾನ್ಯರ ಕೈಗೆ ಸಿಗಲಿಲ್ಲವೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ನಂಜನಗೂಡು ಹಾಗೂ ನರಸೀಪುರ ಕ್ಷೇತ್ರಗಳ ಆಮ್ ಆದ್ಮಿ ಪಕ್ಷದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತಾ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಶೇ.5 ರಷ್ಟು ಅಭಿವೃದ್ಧಿಯಾಗಿದ್ದು, ಇನ್ನುಳಿದ ಶೇ.95 ರಷ್ಟು ಜನರಿಗೆ ಅಭಿವೃದ್ಧಿ ಎಂಬುದು ಮರಿಚೀಕೆಯಾಗಿದೆ. ಅವರೆಲ್ಲರೂ ಸ್ವಾತಂತ್ರ್ಯ ಪೂರ್ವದ ಬದುಕಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಜನ ಸಾಮಾನ್ಯರಿಗೆ 2 ಸಾವಿರ ರೂ.ಗಳ ಸಾಲವನ್ನು ನೀಡಲು ಹಿಂದೇಟು ಹಾಕುವ ರಾಷ್ಟ್ರೀಕೃತ ಬ್ಯಾಂಕುಗಳು ಮೋದಿ ಮರ್ಜಿಗೆ ಸಿಲುಕಿ ಅದಾನಿಗೆ 2 ಲಕ್ಷ ಕೋಟಿ ರೂ. ಸಾಲವನ್ನು ಕೊಟ್ಟು ದಿವಾಳಿಯ ಅಂಚಿನಲ್ಲಿವೆ. ರಾಜ್ಯ ಸರ್ಕಾರಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ ಕೊಡಲು ಆಗದ ಮಟ್ಟಿಗೆ ಬೊಕ್ಕಸವನ್ನು ಬರಿದು ಮಾಡಿಬಿಟ್ಟಿದ್ದಾರೆ. ಪಂಚಾಯಿತಿ ಮಟ್ಟದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತೇನೆ ಎನ್ನುತ್ತಿರುವ ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದರೂ ಶಿಕ್ಷಣಕ್ಕೆ ಆದ್ಯತೆ ನೀಡಲಿಲ್ಲ. ಹಾಗಾಗಿ ದೆಹಲಿ ಸರ್ಕಾರದ ಸೌಲಭ್ಯಗಳು ನಾಡಿನ ಜನರ ಕೈಗೆ ಸಿಗುವಂತಾಗಲು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ನಟ, ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಇತಿಹಾಸ ತಜ್ಞ ಪ್ರೊ.ನಂಜೇರಾಜೇ ಅರಸ್ ಮಾತನಾಡಿದರು. ಇದೇ ವೇಳೆ ಹಿರಿಯ ಮುಖಂಡ ಸೋಸಲೆ ಎಂ.ಸಿದ್ದರಾಜು, ಡಾ.ಎಚ್.ಹನುಮಯ್ಯ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಕ್ಷದ ಕಾರ್ಯಾಧ್ಯಕ್ಷ ಬಿ.ಟಿ.ನಾಗಣ್ಣ, ಉಪಾಧ್ಯಕ್ಷ ಚೆನ್ನಪ್ಪಗೌಡ, ಜಿಲ್ಲಾಧ್ಯಕ್ಷ ರಂಗಯ್ಯ, ನಂಜಪ್ಪ ಕಾಳೇಗೌಡ, ಡಾ.ಹನುಮಂತಯ್ಯ, ಮಹಾದೇವಸ್ವಾಮಿ, ರಾಜ್ಯ ಕಾರ್ಯದರ್ಶಿ ಚನ್ನಪ್ಪಬೆಳಗರ, ನರಸಿಂಹರಾಜ ಕ್ಷೇತ್ರದ ಆಕಾಂಕ್ಷಿ ಧರ್ಮಶ್ರೀ, ವಿಜಯ್, ದರ್ಶನ್‌ಸಿಂಗ್ ಯುವ ಮುಖಂಡ ತಾಯೂರು ಸಾಗರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net