ಶ್ರೀಶೈಲದಲ್ಲಿ ನೂತನ ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ

yatri nivas
Published on

ವಿಜಯವಾಣಿ ಸುದ್ದಿಜಾಲ ಶ್ರೀಶೈಲಂ: ಆಂಧ್ರ ಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಶ್ರೀಶೈಲದಲ್ಲಿ ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಮಹಾಪೀಠದ ವತಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಯಾತ್ರಿನಿವಾಸ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ಕಂಬಿ ಮಂಟಪ ಕಾಮಗಾರಿಗೆ ಕರ್ನಾಟಕದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.

ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅವರು ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಯುಗಾದಿ ವೇಳೆಯಲ್ಲಿ ಶ್ರೀಶೈಲದಲ್ಲಿ ನಡೆಯುವ ಬೃಹತ್ ಜಾತ್ರೆ ಮತ್ತು ರಥೋತ್ಸವಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಹಾಗೆ ಬರುವ ಭಕ್ತರಿಗೆ ವಸತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀಶೈಲ ಪೀಠವು 374 ಕೊಠಡಿಗಳ ಬೃಹತ್ ಯಾತ್ರಿನಿವಾಸ, ಉಚಿತ ಆಸ್ಪತ್ರೆ, ಎರಡು ಡಾರ್ವೆಟ್ರಿ ಹಾಲ್​ಗಳು, ಎರಡು ದಾಸೋಹ ಭವನಗಳು ಹಾಗೂ ವಿಶೇಷವಾಗಿ ಕರ್ನಾಟಕದ ಹಳ್ಳಿ ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ಮೂಲಕ ಹೊತ್ತು ತರುವ ಮಲ್ಲಯ್ಯನ ಕಂಬಿಗಳನ್ನು ಇರಿಸಲು ಕಂಬಿ ಮಂಟಪವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಜತೆಗೆ ನೂರಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಜಮಖಂಡಿ, ನಾಗಣಸೂರು, ಅಂಬಿಕಾನಗರ, ಶಹಾಪುರ, ನೀಲಗಲ್, ಕರಿಬಂಟನಾಳ ಮುಂತಾದ ಮಠಗಳ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಉದ್ಯಮಿಗಳಾದ ನವಲಿ ಹಿರೇಮಠ, ಬಸವರಾಜ ಬುಕ್ಕಾಣಿ, ಶಾಂತಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net