ಶ್ರೀಶಿವಲಂಕಾರೇಶ್ವರನಿಗೆ ವಿಶೇಷ ಪೂಜೆ

Published on

ಹನೂರು: ಚೋಳರ ಕಾಲದಲ್ಲಿ ನಿರ್ಮಿತವಾದ ಇತಿಹಾಸ ಪ್ರಸಿದ್ಧ ವೈಶ್ಯಂಪಾಳ್ಯದ ಶ್ರೀಶಿವಲಂಕಾರೇಶ್ವರ ದೇಗುಲದಲ್ಲಿ ಬುಧವಾರ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಜರುಗಿದ್ದು, ಭಕ್ತರ ದಂಡೇ ಹರಿದು ಬಂದಿತ್ತು.

ತಾಲೂಕಿನಲ್ಲಿರುವ ಏಕೈಕ ಶಿವ ದೇಗುಲ ಇದಾಗಿದ್ದು, ಲಿಂಗಮೂರ್ತಿಯನ್ನು ಒಳಗೊಂಡಿದೆ. ಇಲ್ಲಿ ಅಮಾವಾಸ್ಯೆ, ಹುಣ್ಣಿಮೆ, ಹಬ್ಬ, ಹರಿದಿನ, ಸೋಮವಾರ, ಶುಕ್ರವಾರ ಹಾಗೂ ಇನ್ನಿತರ ವಿಶೇಷ ದಿನಗಳಂದು ಪೂಜೆ, ಪುನಸ್ಕಾರಗಳು ಜರುಗುತ್ತದೆ. ಬುಧವಾರ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಶಿವನ ಸ್ವರೂಪಿ ಲಿಂಗಮೂರ್ತಿಗೆ ವಿವಿಧ ಅಭಿಷೇಕ, ಬಿಲ್ವಾರ್ಚನೆಯನ್ನು ನೆರವೇರಿಸಿ ವಿಶೇಷವಾಗಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ದೀಪ, ಧೂಪಧಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ದೇಗುಲದ ಮುಂಭಾಗದಲ್ಲಿನ ಉಯ್ಯಲೆ ಮಂಟಪದಲ್ಲಿ ಶಿವ-ಪಾರ್ವತಿಯ ಭಾವಚಿತ್ರವನ್ನು ಇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಿ ತೂಗುಯ್ಯಲೆ ಸೇವೆ ನೆರವೇರಿಸಲಾಯಿತು. ಬಸವಮೂರ್ತಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಪೂಜಾ ಕಾರ್ಯವನ್ನು ಕಣ್ತುಂಬಿಕೊಂಡರು.

ಹನೂರು ಸೇರಿದಂತೆ ಬಂಡಳ್ಳಿ, ರಾಮಾಪುರ, ಶಾಗ್ಯ, ಮಂಗಲ, ಲೊಕ್ಕನಹಳ್ಳಿ, ಒಡೆಯರಪಾಳ್ಯ ಹಾಗೂ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಇದರಿಂದ ದೇಗುಲದ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ನಂಜೇಒಡೆಯರ ದೊಡ್ಡಿ ಗ್ರಾಮಸ್ಥರಿಂದ ನಿರಂತರ ದಾಸೋಹ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ದೀಪದಾರತಿ ಸೇವೆ: ಹನೂರಿನ ಆದಿಶಕ್ತಿ ಶ್ರೀಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ದೀಪಧಾರತಿ ಸೇವೆಯನ್ನು ನೆರವೇರಿಸಲಾಯಿತು. ಬೆಳಗ್ಗೆ 5ರಲ್ಲಿ ದೇವಿಗೆ ಪನ್ನೀರು, ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಶಿಣ, ಕುಂಕುಮ ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ವಿಗ್ರಹ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿವಿಧ ದೀಪಗಳಿಂದ ಆರತಿಯನ್ನು ಬೆಳಗಿಸಲಾಯಿತು. ಬಳಿಕ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ನೈವೇದ್ಯವನ್ನು ಅರ್ಪಿಸಿ ಧೂಪಧಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಕೌದಳ್ಳಿ ಹಾಗೂ ಆರ್.ಎಸ್.ದೊಡ್ಡಿಯ ಶ್ರೀಮಹದೇಶ್ವರ ದೇಗುಲ, ಹುಲ್ಲೇಪುರದ ದಿಂಬದಾಳೇಶ್ವರ, ಮಂಗಲದ ಕೋಣನ ಮಾರಮ್ಮ, ಬಂಡಳ್ಳಿಯ ನಾರಾಯಣಸ್ವಾಮಿ ದೇಗುಲ, ಶಾಗ್ಯದ ಜಲಕಂಠೇಶ್ವರ ಹಾಗೂ ಇನ್ನಿತರ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net