

ಆಲೂರು: ತಾಲೂಕಿನ ಪಾಳ್ಯ ಹೋಬಳಿ ಬಾವಸವಳ್ಳಿ ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ದೃಷ್ಟಿಪೂಜೆ ಶ್ರೀಬಸವೇಶ್ವರಸ್ವಾಮಿಗೆ ಬೆಳ್ಳಿ ಕವಚಧಾರಣೆ ಹಾಗೂ ಕಾರ್ತಿಕ ಪೂಜಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ನ.14ರ ಸಂಜೆ ಶ್ರೀರಾಮಲಿಂಗೇಶ್ವರಸ್ವಾಮಿ ಸಮೇತ ರಾಮದೇವರಹಳ್ಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಮುಂಜಾನೆ ದೇಗುಲದಲ್ಲಿ ಗಂಗಾಪೂಜೆ ನಂತರ ನೂತನ ವಿಗ್ರಹ ಬಿಂಬ ಪ್ರತಿಷ್ಠಾಪನೆ ನೆರವೇರಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಪೂಜಾ ಕೈಂಕರ್ಯವನ್ನು ಪುರೋಹಿತರಾದ ಯೋಗೇಶಾಚಾರ್, ಕಾಂತರಾಜಾಚಾರ್, ಚಂದ್ರಾಚಾರ್, ಶಶಿಕುಮಾರ ಶಾಸ್ತ್ರಿ ಮತ್ತಿತರರು ನೆರವೇರಿಸಿ ತೀರ್ಥಪ್ರಸಾದ ವಿನಿಯೋಗ ಮಾಡಿದರು.
ಬಾವಸವಳ್ಳಿ ಗ್ರಾಮದ ಮುಖ್ಯಬೀದಿಗಳಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಶ್ರೀಬಸವೇಶ್ವರ ದೇವರ ಅಡ್ಡೆ ಉತ್ಸವ ನೆರವೇರಿತು. ಗ್ರಾಮದ ಮುಖಂಡರು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಬಾವಸವಳ್ಳಿ, ಕಣತೂರು, ಕೊಡಗಿಹಳ್ಳಿ, ಮುರುಡೂರು, ಬಾವಿಕೊಪ್ಪಲು, ನಾಕಲಗೂಡು, ಗುಡ್ಡೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ದೇವರ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.