

ಕೊಳ್ಳೇಗಾಲ: ಶ್ರೀವಾಸವಿ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಪ್ರತಿಭಾನ್ವಿತ ಮಕ್ಕಳನ್ನು ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀವಾಸವಿ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಸಾಮೂಹಿಕ ನೃತ್ಯ, ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಮತ್ತು ಮನರಂಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
1981ರಲ್ಲಿ ಶ್ರೀವಾಸವಿ ವಿದ್ಯಾ ಶಿಕ್ಷಣ ಸಂಸ್ಥೆ ಆರಂಭಗೊಂಡಿದೆ. ಇದೀಗ 83 ವಸಂತಗಳನ್ನು ಪೂರೈಸಿದೆ. ಈ ಸಂಸ್ಥೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಟ್ಟಿದೆ. ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುವ ಜತೆಗೆ ಸಮಾಜದ ಒಳಿತಿಗೆ ದುಡಿಯುತ್ತಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಶಿಕ್ಷಣ, ಪ್ರತಿಭಾ ಕಾರಂಜಿ, ಕ್ರೀಡಾ ಸ್ಪರ್ಧೆ, ಬ್ಯಾಂಡ್ ಸ್ಪರ್ಧೆ ಇನ್ನಿತರ ಎಲ್ಲ ಚಟುವಟಿಯನ್ನು ಉತ್ತಮವಾಗಿ ನಡೆಸುತ್ತಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಸಂಸ್ಕಾರವನ್ನೂ ಕೊಡುತ್ತಿದೆ. ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಇಲಾಖೆ ನೀಡಿದ ಎಲ್ಲ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡುತ್ತಿದೆ. ವಾರ್ಷಿಕೋತ್ಸವ ಸಂಭ್ರಮವನ್ನು ಉದ್ಯಮಿ ರತನ್ ಟಾಟಾ ಅವರಿಗೆ ಸಮರ್ಪಣೆ ಮಾಡುತ್ತಿರುವುದು ಪ್ರಶಂಸನೀಯ ವಿಚಾರವಾಗಿದೆ ಎಂದರು.
ಪಾಲಕರು ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು. ನಿಮ್ಮ ಮಗುವಿನ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಮತ್ತೊಂದು ಮಗುವಿನ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯಕ್ಕೆ ಹೋಲಿಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಶ್ರೀವಾಸವಿ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಮಾತನಾಡಿ, ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಸಮಸ್ಯೆಗಳ ನಿವಾರಣೆಗೆ ಭಾರತ ದೇಶದ ಅಗತ್ಯವಿದೆ ಎಂಬುವಷ್ಟರ ಮಟ್ಟಿಗೆ ನಮ್ಮ ದೇಶ ಬೆಳೆದಿದೆ. ದೇಶದಲ್ಲಿ ಶೇ.80ರಷ್ಟು ಯುವ ಶಕ್ತಿಯಿದೆ. 30 ಕೋಟಿ ಜನರು ವಿದ್ಯಾರ್ಥಿಗಳಿದ್ದಾರೆ. ಇಡೀ ವಿಶ್ವವೇ ನಮ್ಮ ಕಡೆಗೆ ತಿರುಗಿ ನೋಡುತ್ತಿದೆ ಎಂದು ಹೇಳಿದರು.
ಸ್ವಾತಂತ್ರೃ ಪೂರ್ವದಲ್ಲಿ ಶೇ.18ರಷ್ಟು ಸಾಕ್ಷರತೆ ಪ್ರಮಾಣವಿತ್ತು. ಇದೀಗ ಶೇ.71ಕ್ಕೆ ಏರಿದೆ. ಪ್ರತಿ ವರ್ಷವೂ ನಮ್ಮ ಸಂಸ್ಥೆ ಉತ್ತಮ ಫಲಿತಾಂಶ ನೀಡುತ್ತಿದೆ. ಪಾಲಕರು ಸಹ ನಮ್ಮ ಶಾಲೆಯಲ್ಲಿಯೇ ಓದಿಸಬೇಕೆಂದು ಇಚ್ಛಿಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಉತ್ತಮ ಶೈಕ್ಷಣಿಕ ವ್ಯವಸ್ಥೆ ಇರುವುದು ಇದಕ್ಕೆ ಕಾರಣವಾಗದೆ ಎಂದರು.
ಸಾಂಸ್ಕೃತಿಕ ಕಲರವ: ವಾರ್ಷಿಕೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭೆಗಳಿಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಶ್ರೀವಾಸವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ.ಜಿ.ಶ್ರೀಧರ್, ಖಂಜಾಚಿ ಸುಮಂತ್ ವಿ.ಅಚ್ಚಮ್, ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ, ಕಾರ್ಯದರ್ಶಿ ಶಶಿಧರ್, ಜಂಟಿ ಕಾರ್ಯದರ್ಶಿ ಚೇತನ್, ಸಿ.ಪಿ.ಶರತ್, ಕೆ.ಎಸ್.ನಾಗರಾಜು ಬಾಬು ಮತ್ತು ನಿರ್ದೇಶಕರು, ಬೋಧಕ ವೃಂದ ಹಾಗೂ ಸಿಬ್ಬಂದಿ ಇದ್ದರು.