ಶ್ರೀಲಕ್ಷ್ಮೀದೇವಿ ಜಾತ್ರೋತ್ಸವಕ್ಕೆ ಸಿದ್ಧತೆ

23rajesh4
Published on

ಚಾಮರಾಜನಗರ: ಕೊಂಡೋತ್ಸವ, ಮಡೆ ಉತ್ಸವ, ದನಗಳ ಪರಿಷೆ, ರಥೋತ್ಸವ ಹಾಗೂ ಇನ್ನಿತರೆ ವಿಶಿಷ್ಟ ಆಚರಣೆಗಳೊಂದಿಗೆ ನಡೆಯುವ ಚಂದಕವಾಡಿ ಶ್ರೀಲಕ್ಷ್ಮೀದೇವಿ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ತಾಲೂಕಿನ ಚಂದಕವಾಡಿ ಗ್ರಾಮದಲ್ಲಿರುವ ಶ್ರೀಲಕ್ಷ್ಮಿದೇವಿ ಅಮ್ಮನವರನ್ನು ಆದಿ ದೇವತೆ ಎಂದೇ ಈ ಭಾಗದ ಜನರು ಭಾವಿಸುತ್ತಾರೆ. ಅದರಂತೆ ಬಹಳ ಭಕ್ತಿಭಾವದಿಂದ ಪೂಜೆ ಮಾಡಿಕೊಂಡು ಬರಲಾಗುತ್ತಿದ್ದು, ಪ್ರತಿವರ್ಷವೂ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಫೆ.25 ರಿಂದ ಜಾತ್ರೆ ಶುರುವಾಗಲಿದ್ದು, ಫೆ.28 ರವರೆಗೂ ನಾಲ್ಕೂ ದಿನಗಳ ಕಾಲ ಗ್ರಾಮದಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆಮಾಡಲಿದೆ. ಚಂದಕವಾಡಿ ಗ್ರಾಮವಲ್ಲದೇ ನೆರೆಯ ಕೋಡಿಮೋಳೆ, ಅಂಚಿತಾಳಪುರ ಗ್ರಾಮಸ್ಥರು ಒಟ್ಟುಗೂಡಿ ಆಚರಿಸುವ ಈ ಜಾತ್ರೆಗೆ, ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಲಿದೆ. ಇನ್ನು ಸುತ್ತಮುತ್ತಲ 16 ಗ್ರಾಮಗಳಲ್ಲೂ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ.

ೆ.25 ರಂದು ಬೆಳಗ್ಗೆ 5.30 ಗಂಟೆಗೆ ನೆರವೇರಲಿರುವ ಕೊಂಡೋತ್ಸವದ ಮೂಲಕ ಜಾತ್ರಾಮಹೋತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಲಿದೆ. ೆ.26 ರಂದು ವಿಶಿಷ್ಟವಾಗಿ ಆಚರಿಸುವ ಮಡೆ ಸೇವೆ ಹಾಗೂ ದನಗಳ ಪರಿಷೆ ನೆರವೇರಲಿದೆ. ಫೆ.27 ರಂದು ತಂಪುಸೇವೆ ಹಾಗೂ ೆ.28 ರಂದು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ. ಈ ನಿಟ್ಟಿನಲ್ಲಿ ಗ್ರಾಮಗಳ ಪ್ರತಿಯೊಂದು ಸಮುದಾಯಗಳ ಜನರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕೊಂಡೋತ್ಸವ, ಮಡೆ ಉತ್ಸವ, ದನಗಳ ಪರಿಷೆ, ರಥೋತ್ಸವ ಹಾಗೂ ಇನ್ನಿತರೆ ವಿಶಿಷ್ಟ ಆಚರಣೆಗಳು ನಡೆಯುವುದರಿಂದ ಗ್ರಾಮದಲ್ಲಿ ಜನ ಸಾಗರವೆ ನೆರೆಯಲಿದೆ.

16 ಗ್ರಾಮಗಳಿಗೆ ಹಬ್ಬ:

ತಾಲೂಕಿನ ಚಂದಕವಾಡಿ, ಕೋಡಿಮೋಳೆ, ಅಂಚಿತಾಳಪುರ, ರಾಮಸಮುದ್ರ, ಸರಗೂರು, ಸರಗೂರು ಮೋಳೆ, ಕರಿಯನಕಟ್ಟೆ, ಲಿಂಗರಾಜಪುರ, ಕಣ್ಣೇಗಾಲ, ಸಿದ್ದಯ್ಯನಪುರ, ಅರಳೀಪುರ, ದಡದಹಳ್ಳಿ, ಬಸಪ್ಪನಪಾಳ್ಯ, ಹುರುಳಿನಂಜನಪುರ, ಅಯ್ಯನಪುರ ಹಾಗೂ ಇನ್ನಿತರೆ 16 ಗ್ರಾಮಗಳು ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಈ ಗ್ರಾಮಗಳ ಎಲ್ಲಾ ಸಮುದಾಯದವರು ಸಂಬಂಧಿಕರನ್ನು ಕರೆದು ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಕುಟುಂಬ ಸಮೇತರಾಗಿ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಜಾತ್ರೆಗೆ ಒಂದು ವಾರದಿಂದಲೇ ಈ ಭಾಗದ ಗ್ರಾಮಗಳಲ್ಲಿ ಸಿದ್ಧತೆ ನಡೆದಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ದನಗಳ ಜಾತ್ರೆ ಎಂದೇ ಹೆಸರು:

ಬಹಳ ಹಿಂದಿನಿಂದಲೂ ಚಂದಕವಾಡಿ ಜಾತ್ರೆಯನ್ನು ದನಗಳ ಪರಿಷೆ, ದನಗಳ ಜಾತ್ರೆ ಎಂದೇ ಕರೆಯಲಾಗುತ್ತದೆ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ದನಗಳನ್ನು ಜಾತ್ರೆಗೆ ಕರೆತರಲಾಗುತ್ತದೆ. ಉತ್ತಮವಾದ ಜೋಡಿ ಎತ್ತುಗಳನ್ನು ಆಯ್ಕೆ ಮಾಡಿ, ಬಹುಮಾನಗಳನ್ನು ನೀಡುವ ಪರಿಪಾಟಲು ಬೆಳೆಸಿಕೊಂಡು ಬರಲಾಗಿದೆ. ಲಕ್ಷಾಂತರ ರೂ, ಬೆಲೆ ಬಾಳುವ ಎತ್ತುಗಳು ಜಾತ್ರೆಯಲ್ಲಿ ಪಾಲ್ಗೊಂಡು ಮೆರುಗು ನೀಡುತ್ತವೆ. ಇದರ ಜತೆಗೆ ಈ ಹಬ್ಬದಲ್ಲಿ ಮಡೆ ಉತ್ಸವಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಇದ್ದು, ಇದನ್ನು ತುಂಬ ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ. ಲಕ್ಷ್ಮೀ ದೇವಿಯ ವೈಶಿಷ್ಟ್ಯ ಇರುವುದು ದೇವಾಲಯದ ಆವರಣದಲ್ಲಿ ನಡೆಯುವ ಮಡೆ ಉತ್ಸವದಲ್ಲಿ ಎಂಬುದು ಭಕ್ತರ ನಂಬಿಕೆಯಾಗಿದೆ. ಆಗಾಗಿ ಹರಕೆ ಹೊತ್ತ ಭಕ್ತರು, ಬೆಳಗ್ಗೆಯೇ ಸ್ನಾನಮಾಡಿ, ಮಡಿ ಬಟ್ಟೆ ಉಟ್ಟು ದೇವಾಲಯದ ಆವರಣದಲ್ಲೆ ಒಲೆ ಹಚ್ಚಿ ಅಕ್ಕಿ, ಬೆಲ್ಲ ಮಿಶ್ರಣದ ಅಡುಗೆ ತಯಾರಿಸುತ್ತಾರೆ. ಅದನ್ನು ದೇವರಿಗೆ ನೈವೇದ್ಯ ಮಾಡಿ ನಂತರವಷ್ಟೆ ತಮ್ಮ ಮನೆಗಳಲ್ಲಿ ಹಬ್ಬದ ಅಡುಗೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ೆ.28 ರಂದು ರಥೋತ್ಸವ:

ಐತಿಹಾಸಿಕ ಶ್ರೀಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ಶುಭ ಶುಕ್ರವಾರ ೆ.28 ರಂದು ವಿಜೃಂಭಣೆಯಿಂದ ನೆರವೇರಲಿದೆ. ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡ ತೇರಿನೊಳಗೆ ಶ್ರೀಲಕ್ಷ್ಮೀದೇವಿಯ ವಿಗ್ರಹವನ್ನಿಟ್ಟು, ಭಕ್ತರು ಭಾರಿ ಜಯಘೋಷಗಳೊಂದಿಗೆ ತೇರನ್ನು ದೇವಾಲಯದ ಆವರಣದಲ್ಲಿ ಎಳೆಯುತ್ತಾರೆ. ಇದಕ್ಕೂ ಮುನ್ನಾ ೆ.26 ರಂದು ಅಮ್ಮನವರಿಗೆ ಹೊಸ ಅಲಂಕಾರ ಮಾಡಿ ಕೋಡಿಮೋಳೆ ಗ್ರಾಮದಲ್ಲಿ ಮತ್ತು ಚಂದಕವಾಡಿ ಗ್ರಾಮದಲ್ಲಿ ಉತ್ಸವ ನೆರವೇರಿಸಲಾಗುತ್ತದೆ. ಜಾತ್ರಾಮಹೋತ್ಸವದ ಅಂಗವಾಗಿ ಈಗಾಗಲೇ ಶ್ರೀಲಕ್ಷಿದೇವಿ ದೇವಾಲಯವನ್ನು ಸುಣ್ಣ, ಬಣ್ಣಗಳಿಂದ ಅಲಂಕೃತಗೊಳಿಸಲಾಗಿದ್ದು, ಇಡೀ ದೇವಾಲಯ ಕಂಗೊಳಿಸುತ್ತಿದೆ.

ಈಗಾಗಲೇ ಚಂದಕವಾಡಿ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ೆ.24 ರಾತ್ರಿಯಿಂದಲೇ ವಿವಿಧ ಪೂಜಾಕೈಂಕರ್ಯಗಳನ್ನು ಪ್ರಾರಂಭವಾಗಲಿದ್ದು, ೆ.28 ರಥೋತ್ಸವ ಜರುಗಲಿದೆ.

-ಮಹೇಶ್, ಪ್ರಧಾನ ಅರ್ಚಕ, ಶ್ರೀಲಕ್ಷ್ಮಿದೇವಿ ದೇವಸ್ಥಾನ, ಚಂದಕವಾಡಿ

ಪ್ರತಿವರ್ಷದಂತೆ ಈ ವರ್ಷವೂ ಚಂದಕವಾಡಿ ಶ್ರೀಲಕ್ಷ್ಮೀದೇವಿ ಜಾತ್ರಾಮಹೋತ್ಸವ ನಡೆಯಲಿದೆ. 16 ಗ್ರಾಮಗಳ ಪ್ರತಿಯೊಂದು ಸಮುದಾಯದವರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

-ಪ್ರಕಾಶ್, ನಿವಾಸಿ, ಚಂದಕವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net