ಶ್ರೀಲಂಕಾದವರಂತೆ ಜನಪ್ರತಿನಿಧಿಗಳಿಗೆ ಪಾಠ!, ಪ್ರತಿಭಟನಾನಿರತ ರೈತ ಅಶ್ವತ್ಥಪ್ಪ ಎಚ್ಚರಿಕೆ, ಚನ್ನರಾಯಪಟ್ಟಣದಲ್ಲಿ ಕೃಷಿಕರ ಅನಿರ್ದಿಷ್ಟಾವಧಿ ಧರಣಿ

12 CPTN 1
Published on

ಚನ್ನರಾಯಪಟ್ಟಣ: ಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶ್ರೀಲಂಕಾದವರಂತೆ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ರೈತ ಅಶ್ವತ್ಥಪ್ಪ ಎಚ್ಚರಿಕೆ ನೀಡಿದರು.

ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟದ 39ನೇ ದಿನವಾದ ಗುರುವಾರ ಮಾತನಾಡಿದರು. ಬಡಜನರು ಕಡುಬಡವರಾಗುವಂತೆ ಮಾಡುವ ಕೆಲಸಗಳು ನಡೆಯುತ್ತಿವೆ. ಭ್ರಷ್ಟಾಚಾರ ಮಿತಿ ಮೀರಿದೆ, ಬೆಲೆಗಳು ಗಗನಕ್ಕೇರಿವೆ. ಲೋಕಸೇವಾ ಆಯೋಗದಲ್ಲಿ ಅಕ್ರಮ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ, ಹೀಗೆ ಪ್ರತಿ ನೇಮಕಾತಿಗಳಲ್ಲೂ ಅಕ್ರಮಗಳೇ ತುಂಬಿವೆ. ಇದನ್ನು ಮುಚ್ಚಿಹಾಕಲು ಅಜಾನ್, ಹಿಜಾಬ್, ಜಟ್ಕಾ ಕಟ್ ಎಂದು ಏನೇನೋ ಹೇಳಿ ದಾರಿತಪ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಸರ್ಕಾರಗಳು ಹಣ ಮಾಡುವುದನ್ನೇ ಗುರಿಯಾಗಿಸಿಕೊಂಡಿವೆ. ನಮ್ಮ ನಾಡಿನ ರೈತರು, ಶ್ರಮಿಕರು, ಬಡಜನರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರಗಳು ನಮ್ಮ ತುಂಡು ಭೂಮಿಗಳನ್ನು ಸ್ವಾಧೀನಪಡಿಸಿಕೊಂಡು ಕಾರ್ಪೋರೇಟ್ ಕಂಪನಿಗಳ ಕೈಗಿಡಲು ತುದಿಗಾಲಲ್ಲಿ ನಿಂತಿರುವುದೇ ಸಾಕ್ಷಿ ಎಂದು ಹೇಳಿದರು.

ಹೊರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಭೂಮಿ ಉಳಿವಿಗಾಗಿ ಮಾಡುತ್ತಿರುವ ಹೋರಾಟ ನ್ಯಾಯಯುತ ಮತ್ತು ಜನಪರವಾಗಿದೆ. ಆದ್ದರಿಂದ ಯಾರಿಗೂ ಭಯಪಡುವ ಅವಶ್ಯಕತೆಯಿಲ್ಲ. ಸಂವಿಧಾನ ನೀಡಿರುವ ಹಕ್ಕಿನಿಂದ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದವರು. ನಾವು ಕೊಡುವ ತೆರಿಗೆ ಹಣದಲ್ಲಿ ವೇತನ ಪಡೆಯುವ ಅಧಿಕಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಪ್ರೊ. ನಂಜುಂಡಸ್ವಾಮಿ ಅವರು ಹೇಳುತ್ತಿದ್ದಂತೆ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಯ ಮೊದಲ ಕೂಲಿಯಾಳು ಎಂಬುದು ನೆನಪಿರಲಿ ಎಂದರು.

ಇಂದಲ್ಲ ನಾಳೆ ಅವರೆಲ್ಲರೂ ನಮ್ಮ ಹಕ್ಕೋತ್ತಾಯಗಳನ್ನು ಪರಿಗಣಿಸಿ, ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ೋಷಿಸಲೇ ಬೇಕು. ಅಲ್ಲಿಯವರೆಗೂ ನಾವು ಹೋರಾಟ ಬಿಡುವುದಿಲ್ಲ ಎಂದು ತಿಳಿಸಿದರು.

ಮುಖಂಡರಾದ ನಾರಾಯಣಮ್ಮ, ನಂದೀಶ್, ನಂಜಪ್ಪ, ಮೋಹನ್, ವೆಂಕಟೇಶ್ ಮುಕುಂದ್, ನಂಜೇಗೌಡ, ಮಾರುತೇಶ್ ಮತ್ತಿತರರಿದ್ದರು.

ನಾನು ಮಣ್ಣಲ್ಲೇ ಹುಟ್ಟಿದ್ದೇನೆ. ಮಣ್ಣಲ್ಲೇ ಬೆಳೆದಿದ್ದೇನೆ. ಮಣ್ಣಲ್ಲೇ ಸಾಯುತ್ತೇನೆ ಹೊರತು, ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೈರಪ್ಪ, ನಲ್ಲಪ್ಪನಹಳ್ಳಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net