

ಸೊರಬ: ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿಯಿಂದ 10ನೇ ವರ್ಷದ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.
ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿಯಿಂದ 10 ದಿನಗಳ ಕಾಲ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ 10 ದಿನಗಳ ಕಾಲ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸತತವಾಗಿ 9 ವರ್ಷಗಳ ದಸರಾ ಆಚರಣೆ ಪೂರೈಸಿದ ಸಮಿತಿ ಈ ಬಾರಿ ದಶಮಾನೋತ್ಸವ ಆಚರಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು ಶ್ರೀರೇಣುಕಾಂಬಾ ಕಲ್ಯಾಣ ಮಂಟಪದ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಎಸ್.ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ. ಜತೆಗೆ ದಶಮಾನೋತ್ಸವದ ಅಂಗವಾಗಿ ಜಂಗಿ ಕುಸ್ತಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯ ಎನ್.ಇ.ನಾಗರಾಜ್, ದಸರಾ ಉತ್ಸವ ಆಚರಣಾ ಸಮಿತಿ ಉಪಾಧ್ಯಕ್ಷ ರಘು ಸ್ವಾದಿ, ಖಜಾಂಚಿ ವಸಂತ್ ಶೇಟ್, ಕಾರ್ಯದರ್ಶಿ ಪ್ರಜ್ವಲ್ ಚಂದ್ರಗುತ್ತಿ, ಸಮಿತಿಯ ಯಶವಂತಪ್ಪ ಮಾಸ್ತರ್, ಹನುಮಂತಪ್ಪ ಇತರರಿದ್ದರು.