ಶ್ರೀರಾಮುಲು ಉಪಮುಖ್ಯಮಂತ್ರಿಯಾಗಲಿ; ಮಾಜಿ ಸಚಿವ ಜನಾರ್ದನ ರೆಡ್ಡಿ ಆಶಯ; ಎಸ್.ಮೇಡಹಳ್ಳಿಯಲ್ಲಿ ವೇಮನ ಜಯಂತಿ

9 ank 2
Published on

ಆನೇಕಲ್: ವಾಲ್ಮೀಕಿ ಜನಾಂಗದ ಆಶಯದಂತೆ ಶ್ರೀರಾಮುಲು ಉಪಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

ಸರ್ಜಾಪುರ ಸಮೀಪದ ಎಸ್.ಮೇಡಹಳ್ಳಿಯಲ್ಲಿ ರೆಡ್ಡಿ ಸಮುದಾಯದಿಂದ ಭಾನುವಾರ ಆಯೋಜಿಸಿದ್ದ ವೇಮನ ಜಯಂತಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಒಂದು ಜನಾಂಗಕ್ಕೆ ಸೀಮಿತರಲ್ಲ, ಇಡೀ ರಾಜ್ಯದ ಹಾಗೂ ಬಿಜೆಪಿಯ ಹಿರಿಯ ನಾಯಕ. ಹೀಗಾಗಿ ವಾಲ್ಮೀಕಿ ಜನಾಂಗದ ಆಶಯದಂತೆ ಅವರನ್ನು ಗುರುತಿಸಿ ಉಪಮುಖ್ಯಮಂತ್ರಿ ಮಾಡಬೇಕು ಎಂದರು.

ಸಹೃದಯಿಗಳಾದ ರೆಡ್ಡಿಗಳು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮುದಾಯ ಅಭಿವೃದ್ಧಿಗೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಐಕ್ಯತೆಯಿಂದ ಕೆಲಸಗಳನ್ನು ಮಾಡಲು ನನ್ನ ಸಂಪೂರ್ಣ ಸಹಕಾರವಿದೆ. 200 ಎಕರೆ ಜಾಗ ಖರೀದಿ ಮಾಡಿ, 108 ಅಡಿ ಎತ್ತರದ ಶಿವಲಿಂಗ ಸ್ಥಾಪನೆ ಮಾಡಿ ಎರಡೂ ಬದಿ 50 ಅಡಿ ಎತ್ತರದ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ವಿಗ್ರಹಗಳನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವ ಘೋಷಣೆಯನ್ನು ಈಗಾಗಲೇ ಮಾಡಿದ್ದು, ಇದರ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹೇಮರಡ್ದಿ ಮಲ್ಲಮ್ಮತಮ್ಮದೇ ಆದ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಗೌರವ ಸ್ಥಾನಗಳಿಸಿದ್ದಾರೆ. ಮಹಾಯೋಗಿ ವೇಮನರ ಪದ್ಯಗಳನ್ನು ಓದುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಟಾರುಪಲ್ಲಿಯ ವಿಶ್ವ ವೇಮನಕೊಂಡದ ಪೀಠಾಧ್ಯಕ್ಷ ಶ್ರೀ ಸದಾನಂದಾರ್ಯ ನಾರಾಯಣ ಸ್ವಾಮೀಜಿ, ಬಳ್ಳೂರಿನ ಬ್ರಹ್ಮರ್ಷಿ ವೆಂಕಟಸ್ವಾಮಿ ರೆಡ್ಡ ಸ್ವಾಮೀಜಿ ಆಶೀರ್ವಚನ ನೀಡಿದರು. ಎತ್ತುಗಳ ಮೆರವಣಿಗೆ, ಮಕ್ಕಳಿಂದ ಸಾಂಸ್ಕೃತಿಕ ಕಾರ‌್ಯಕ್ರಮ ಆಯೋಜಿಸಲಾಗಿತ್ತು. ಅಂತಾರಾಷ್ಟ್ರೀಯ ಯೋಗಪಟು ಯಶವಂತ್‌ರೆಡ್ಡಿ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಶ್ರೀ ವೇಮನ ಸೇವಾ ಟ್ರಸ್ಟ್ ಸದಸ್ಯರಾದ ಮುನಿತಿಮ್ಮಾರೆಡ್ಡಿ, ಜೈ ಶ್ರೀರಾಮ್, ಮುತ್ತುಕೇಶವ, ಮುರಳಿ, ಸತೀಶ್ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net