

ಬೆಳಗಾವಿ: ಹಿಂದು ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರೊಂದಿಗೆ ವಹಿವಾಟು ನಡೆಸದಂತೆ ಬಹಿಷ್ಕಾರ ಅಭಿಯಾನ ಆರಂಭಿಸಲಾಗುವುದು. ಆರ್ಥಿಕ ಬಹಿಷ್ಕಾರದಿಂದ ಮಾತ್ರ ಮುಸ್ಲಿಂ ಮಾನಸಿಕತೆ ತಿದ್ದಲು ಸಾಧ್ಯ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ಕಾರ ಜಾರಿಗೆ ತಂದಿದ್ದ ಧಾರ್ಮಿಕ ದತ್ತಿ ನಿಧಿ ಕಾಯ್ದೆಯಲ್ಲಿ ಹಿಂದು ದೇವಾಲಯ, ಜಾತ್ರೆ, ಸಮಾರಂಭಗಳಲ್ಲಿ ಹಿಂದುಯೇತರರು ವ್ಯಾಪಾರ ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದನ್ನು ಅಧಿಕಾರಿಗಳು ಕಡ್ಡಾಯ ವಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈಗಾಗಲೇ ಕರಾವಳಿ ಭಾಗದಲ್ಲಿ ಮುಸ್ಲಿಮರಿಗೆ ಹಿಂದು ದೇವಾಲಯ, ಜಾತ್ರೆಗಳಲ್ಲಿ ವ್ಯಾಪಾರ ಸೇರಿ ಎಲ್ಲ ರೀತಿಯ ಆರ್ಥಿಕ ಬಹಿಷ್ಕಾರ ಹಾಕಲಾಗಿದೆ. ಮುಸ್ಲಿಮರ ಅಂಗಡಿಗಳ ಕುರಿತು ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿ ಒಳಗೊಂಡಿರುವ ಕರಪತ್ರಗಳನ್ನು ಮನೆ ಮನೆಗೆ ಹಂಚುವ ಕೆಲಸವನ್ನು ಶ್ರೀರಾಮಸೇನೆಯಿಂದ ಮಾಡಲಾಗುವುದು ಎಂದರು. ಹಿಂದು ಸಂಪ್ರದಾಯ, ದೇವರು, ನಮ್ಮ ಸಂವಿಧಾನ, ನ್ಯಾಯಾಲಯ, ಕಾನೂನುಗಳಿಗೆ ಮುಸಲ್ಮಾನರು ಬೆಲೆ ಕೊಡುತ್ತಿಲ್ಲ. ಮುಸ್ಲಿಮರ ಕ್ರೌರ್ಯ ದೇಶಕ್ಕೆ ಗಂಡಾಂತರ ಉಂಟು ಮಾಡಲಿದೆ. ನಮಗೆ ದೇಶ, ಸಂವಿಧಾನ, ಹಿಂದುತ್ವ ಉಳಿಸಬೇಕಾಗಿದೆ. ನಾವು ಈ ದೇಶ ಕಳೆದುಕೊಳ್ಳಲು ತಯಾರಿಲ್ಲ. ಮುಸ್ಲಿಂ ಮಾನಸಿಕತೆ ತಿದ್ದಬೇಕಾದರೆ ಆರ್ಥಿಕ ಬಹಿಷ್ಕಾರವೆಂಬ ಅಹಿಂಸಾತ್ಮಕ ಶಸ್ತ್ರದಿಂದ ಸಾಧ್ಯ ಎಂದರು.
ಕಾಶ್ಮೀರಿ ಹಿಂದುಗಳಿಗೆ ನೆಲೆ ಕಲ್ಪಿಸಿ: ಮುಸ್ಲಿಂ ದೌರ್ಜನ್ಯ, ಕ್ರೌರ್ಯಕ್ಕೆ ಕಾಶ್ಮೀರವನ್ನು ತೊರೆದ ಲಕ್ಷಾಂತರ ಹಿಂದುಗಳು ಬೆಂಗಳೂರು, ಪುಣೆ, ಮುಂಬೈ ಸೇರಿ ವಿವಿಧ ನಗರಗಳಲ್ಲಿ ಅನಾಥರಂತೆ ಬದುಕು ಸಾಗಿಸುತ್ತಿದ್ದಾರೆ.
ಅವರಿಗೆಲ್ಲ ಕಾಶ್ಮೀರದಲ್ಲಿಯೇ ಮರುನೆಲೆ ಕಲ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಕೇವಲ ಕಶ್ಮೀರ್ ಫೈಲ್ಸ್ ಸಿನೆಮಾ ತೋರಿಸಿದರೆ ನ್ಯಾಯ ಸಿಗುವುದಿಲ್ಲ. 32 ವರ್ಷಗಳಿಂದ ಧ್ವನಿ ಎತ್ತದವರು ಇದೀಗ ಸಿನೆಮಾ ತೋರಿಸುವ ಕೆಲಸ ಮಾಡುತ್ತಿದ್ದಾರೆ ವಿನಃ ನೆಲೆ ಕಲ್ಪಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ, ಪಂತ ಬಾಳೇಕುಂದ್ರಿ ಸೇರಿ ದೊಡ್ಡ ದೊಡ್ಡ ದೇವಸ್ಥಾನಗಳ ಆವರಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಮರು ವ್ಯಾಪಾರ ನಡೆಸದಂತೆ ಆರ್ಥಿಕವಾಗಿ ಬಹಿಷ್ಕರಿಸುವ ಅಭಿಯಾನವನ್ನು ಶ್ರೀರಾಮ ಸೇನೆ ಆರಂಭಿಸಲಿದೆ. ಧಾರ್ಮಿಕ ದತ್ತಿ ಇಲಾಖೆ ವತಿಯಿಂದಲೇ ಮುಸ್ಲಿಂ ವ್ಯಾಪಾರಿಗಳಿಗೆ ನೋಟಿಸ್ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಪ್ರಮೋದ ಮುತಾಲಿಕ್ ಹೇಳಿದರು.