ಶ್ರೀರಾಮಸೇನೆ ದತ್ತಮಾಲಾ ಅಭಿಯಾನ

13 ckm 1a web
Published on

ಚಿಕ್ಕಮಗಳೂರು: ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಬಿಗಿ ಪೊಲೀಸ್ ಬಂದೋ ಬಸ್ತ್​ನಲ್ಲಿ ನಡೆಯಿತು. ಸಾವಿರಾರು ಭಕ್ತರು ಶ್ರೀಗುರು ದತ್ತಾತ್ರೇಯ ಮೂರ್ತಿ ಮೆರವಣಿಗೆಯಲ್ಲಿ ಸಾಗಿದರು.

ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮುಖಂಡರು ಶ್ರೀ ಶಾರಾದಾಂಭೆಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಬಹಿರಂಗ ಸಭೆ ನಡೆಸಿ ಶೋಭಾಯಾತ್ರೆ ಆರಂಭಿಸಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಕೇಸರಿ ಧ್ವಜ ಹಿಡಿದು ದತ್ತಪೀಠ ನಮ್ಮದು ಎಂದು ಘೊಷಣೆಯೊಂದಿಗೆ ಪುಷ್ಪಾಲಂಕೃತ ವಾಹನದಲ್ಲಿ ದತ್ತವಿಗ್ರಹವನ್ನು ಪ್ರತಿಷ್ಠಾಪಿಸಿ ಸಾಗಿದರು. ಕೆಲ ಯುವಕರು ಬಜರಂಗಿ ಚಿತ್ರವುಳ್ಳ ಬೃಹತ್ ಧ್ವಜ ಹಿಡಿದು ತಿರುಗಿಸುತ್ತ ಸಾಗಿದರು. ಡೊಳ್ಳುಕುಣಿತ, ವಿವಿಧ ತಮಟೆ ವಾದ್ಯಕ್ಕೆ ಭಕ್ತರು ಹಷೋದ್ಘಾರದೊಂದಿಗೆ ಹೆಜ್ಜೆ ಹಾಕಿದರು. ಕೇಸರಿ ಬಂಟಿಂಗ್ಸ್​ನಿಂದ ಅಲಂಕರಿಸಿದ್ದ ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾಪನಗೊಂಡಿತು.

ಕೆಲವು ಯುವಕ, ಯುವತಿಯರು ಕೇಸರಿ ವಸ್ತ್ರತೊಟ್ಟು ಪಾಲ್ಗೊಂಡಿದ್ದರೆ ಮಹಿಳೆಯರು, ವೃದ್ಧರು ಸಾಥ್ ನೀಡಿದರು. ಅಲ್ಲಲ್ಲಿ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.  ಶ್ರೀ ಗುರುದತ್ತಾತ್ರೇಯರ ಭಾವಚಿತ್ರದೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಮಹೇಶ್ ಕಟ್ಟಿನಮನಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಈಶ್ವರಗೌಡ, ಜಯಂತ್ ನಾಯಕ್, ಬಸವರಾಜ್ ಗಾಯಕ್ವಾಡ್, ಪರಶುರಾಮ್ ನಡುಮನಿ, ಅರ್ಜುನ್ , ಅರ್ಚಕ ರಾಜೇಶ್, ಸಮಸ್ತ ವಿಶ್ವಧರ್ಮ ಸಂಸ್ಥಾನ ಸಂಸ್ಥಾಪಕ ಯೋಗೀಶ್ ಸಂಜಿತ್ ಸುವರ್ಣ, ದುರ್ಗಾಸೇನೆ ಅಧ್ಯಕ್ಷೆ ನಯನಾ ಶೋಭಾಯಾತ್ರೆಯಲ್ಲಿ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net