ಶ್ರೀರಾಮನ ಉತ್ಸವಮೂರ್ತಿ ಮೆರವಣಿಗೆ

30 yelandur 03
Published on

ಗುಂಡ್ಲುಪೇಟೆ: ಪಟ್ಟಣದ ಶ್ರೀ ಕೋದಂಡರಾಮ ದೇವಸ್ಥಾನ, ಶ್ರೀರಾಮ ಮಂದಿರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತಿಕಾ ಬೃಂದಾವನ ಸನ್ನಿದಾನದಲ್ಲಿ ಗುರುವಾರ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ದೇವಸ್ಥಾನವನ್ನು ತಳಿರು-ತೋರಣಗಳಿಂದ ಅಲಂಕರಿಸಿ ನಾನಾ ಬಗೆಯ ರಂಗೋಲಿ ಬಿಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರು ಶ್ರೀರಾಮ ದೇವರ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ದೇವಸ್ಥಾನದ ಒಳಭಾಗದ ತೊಟ್ಟಿಲಿನಲ್ಲಿ ಶ್ರೀರಾಮ ಚಂದ್ರನ ಉತ್ಸವಮೂರ್ತಿಯನ್ನು ಇರಿಸಿ ಮಹಿಳೆಯರು ಹಾಗೂ ಭಕ್ತರು ತೂಗುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಧ್ಯಾಹ್ನ ಮಂಗಳವಾದ್ಯ ಸಮೇತ ಪಟ್ಟಣದ ಪ್ರಮುಖ ಬೀದಿಯಲ್ಲಿ ಶ್ರೀರಾಮ ಚಂದ್ರರ ಉತ್ಸವ ಮೂರ್ತಿಯನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ಪಟ್ಟಣ ಸೇರಿದಂತೆ ಹಲವೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಾಮಚಂದ್ರನ ದರ್ಶನ ಪಡೆದರು.

ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೊಸಂಬರಿ ಪ್ರಸಾದ ವಿತರಿಸಲಾಯಿತು. ಕೊದಂಡರಾಮ ದೇವಸ್ಥಾನ ಹಾಗೂ ಗುರುರಾಯರ ಮೃತ್ತಿಕಾ ಬೃಂದಾವನ ಟ್ರಸ್ಟ್ ಹಾಗೂ ಶ್ರೀರಾಮ ಮಂದಿರಂ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರ, ಮಹಿಳಾ ಸಂಘದ ಭಜನಾ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net