

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದು ನಾಯಕರು ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌಜನ್ಯ ಖಂಡಿಸಿ ಶ್ರೀರಾಮ ಸೇನಾ ಕರ್ನಾಟಕ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ನಾಯಕರು ದುಷ್ಟ ಪ್ರವೃತ್ತಿ ಮುಂದುವರಿಸಿದ್ದಾರೆ. ಅಧಿಕಾರ, ಹಣದ ಪ್ರಭಾವ ಬಳಸಿ ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ, ಜೀವ ಬೆದರಿಕೆ ಪ್ರಕರಣ ಹಾಗೂ ರೌಡಿಶೀಟರ್ ತೆರೆಯುತ್ತಿದ್ದಾರೆ. ಇಂಥ ಪ್ರವೃತ್ತಿ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಿಂದು ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆಡಳಿತ ವ್ಯವಸ್ಥೆಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣವರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಮೈಲಾರ ಗುಡ್ಡಪ್ಪನವರ, ಪಾಂಡು ಯಮೋಜಿ, ಶಿವಾನಂದ ತಳವಾರ, ಮಂಜು ಪಡ್ನಶಿ, ನಿಜಗುಣಿ ಅಂಗಡಿ, ಸಾಗರ ತಡಹಾಳ, ನಾಗರಾಜ ತಳವಾರ, ಕುಮಾರ ನಾಯ್ಕರ್, ಇತರರಿದ್ದರು.