

ಅರಕಲಗೂಡು: ಇಲ್ಲಿಗೆ ಸಮೀಪದ ಜೋಡಿಗುಬ್ಬಿ ಗ್ರಾಮದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಭಾನುವಾರ ಭಕ್ತಿ ಸಂಭ್ರಮದಿಂದ ನೆರವೇರಿತು.
ಗ್ರಾಮದ ಶ್ರೀರಾಮ ಸೇವಾ ಸಂಘವು ರಾಮ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆ ಸೂರ್ಯ ನಮಸ್ಕಾರ, ಗಂಗಾಪೂಜೆ, ಕಳಸ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಸಾಮೂಹಿಕ ಭಜನೆ ನಡೆಯಿತು. ಭಕ್ತರು ಶ್ರೀರಾಮನ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ನಡೆಸುತ್ತಾ ಮೆರವಣಿಗೆಯಲ್ಲಿ ತೆರಳಿ ಭಕ್ತಿ ಸಮರ್ಪಿಸಿದರು.
ಬೆಂಗಳೂರಿನ ಜೋಡಿಗುಬ್ಬಿ ವಿಪ್ರವೃಂದದ ಅಧ್ಯಕ್ಷ ಜಿ.ಎನ್.ರಾಮಚಂದ್ರ ಮಾತನಾಡಿ, ದಾನಿಗಳು ನೀಡಿದ ಜಾಗದಲ್ಲಿ ಭಕ್ತರ ಸಹಕಾರದಿಂದ ಸುಸಜ್ಜಿತ ರಾಮಮಂದಿರ ನಿರ್ಮಿಸಿದ್ದು, ನಮ್ಮ ಪೂರ್ವಿಕರು ನಡೆಸುತ್ತಿದ್ದ ರಾಮ ಸೇವಾಕಾರ್ಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೊರ ಊರುಗಳಲ್ಲಿ ನೆಲೆಸಿರುವವರು ಗ್ರಾಮಕ್ಕೆ ಬಂದಾಗ ತಂಗಲು ಅನುಕೂಲವಾಗುವಂತೆ ಅತಿಥಿ ಗೃಹ ನಿರ್ಮಿಸಲಾಗುತ್ತಿದ್ದು, ಭಕ್ತರು ದೇಣಿಗೆ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದರು.
ನಿವೃತ್ತ ಐಎಎಸ್ ಅಧಿಕಾರಿ ಎ.ವಿ.ಪ್ರಸನ್ನ ಮಾತನಾಡಿ, ಗಣೇಶೋತ್ಸವ ಹಾಗೂ ರಾಮೋತ್ಸವಗಳು ನಮ್ಮ ಸಂಸ್ಕೃತಿ, ಸಹಬಾಳ್ವೆ ದೇಶದ ಏಕತೆ ಮತ್ತು ಅಖಂಡತೆಯ ಸಂಕೇತವಾಗಿದೆ ಎಂದರು.
ಶ್ರೀರಾಮ ಸೇವಾ ಸಂಘದ ಅಧ್ಯಕ್ಷ ಜಿ.ಎನ್. ದೇವರಯ್ಯ, ಉಪಾಧ್ಯಕ್ಷ ಜಿ.ಎನ್. ರಾಮಚಂದ್ರ, ಕಾರ್ಯದರ್ಶಿ ಜಿ.ಎಸ್. ಮುರಳೀಧರ್, ಖಜಾಂಚಿ ಜಿ.ಎನ್. ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.