

ನಾಪೋಕ್ಲು: ಇಲ್ಲಿಗೆ ಸಮೀಪದ ಚೆರಿಯ ಪರಂಬುವಿನ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹಿರಿಯ ಪ್ರಾಥಮಿಕ ಹಂತದ ಬಾಲಕ, ಬಾಲಕಿಯರು ಹಾಗೂ ಪ್ರೌಢಶಾಲಾ ಬಾಲಕಿಯರು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮೇಲಾಟದಲ್ಲಿ ಪ್ರೌಢಶಾಲಾ ಬಾಲಕ, ಬಾಲಕಿಯರು ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಭರ್ಜಿ ಎಸೆತ, ತಟ್ಟೆ ಎಸೆತದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಹಾಕಿ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್‌ನಲ್ಲಿ ವಿಜೇತರಾಗಿ ಜಿಲ್ಲಾ ಹಂತಕ್ಕೆ ಪ್ರವೇಶಿಸಿದ್ದಾರೆ, ಪ್ರೌಢಶಾಲಾ ಬಾಲಕಿಯರು ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್‌ನಲ್ಲಿ ವಿಜೇತರಾಗಿದ್ದಾರೆ. ಪ್ರಾಥಮಿಕ ಶಾಲಾ ಬಾಲಕಿಯರು ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದರೆ.
ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಬಾಲಕಿಯರು ಹಾಗೂ ಬಾಲಕರು ಬಾಲ್ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್‌ನಲ್ಲಿ ದ್ವಿತೀಯ ಸ್ಥಾನವನ್ನು ತಾಲೂಕು ಮಟ್ಟದಲ್ಲಿ ಪಡೆದಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ಬಿ.ಎಂ. ಶಾರದಾ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಸರಿತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ .ವ್ಯವಸ್ಥಾಪಕರಾಗಿ ಕಾಳಯ್ಯ ಎಂಡಿ ಕರ್ತವ್ಯ ನಿರ್ವಹಿಸಿದ್ದರು.