

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಭಾನುವಾರ ನಡೆದ ವಿವಿಧ ಇಲಾಖೆಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ತಂಡ ಪ್ರಥಮ ಬಹುಮಾನ ಪಡೆಯಿತು. ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಅಗ್ನಿಶಾಮಕ ದಳ ದ್ವಿತೀಯ ಹಾಗೂ ಪೋಲೀಸ್ ಇಲಾಖೆ ತಂಡ ತೃತೀಯ ಬಹುಮಾನಗಳನ್ನು ಪಡೆದುಕೊಂಡವು. ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ, ಶಿಕ್ಷಕರ ತಂಡ, ವಕೀಲರ ತಂಡ, ಕೈಗಾರಿಕಾ ಭದ್ರತಾ ಪಡೆ, ಪಂಚಾಯತ್ ರಾಜ್ ಇಲಾಖೆ ಸೇರಿತೆ ಒಂಬತ್ತು ತಂಡಗಳು ಭಾಗವಹಿಸಿ ಗೆಲುವಿಗಾಗಿ ರೋಚಕ ಕ್ರೀಡೆ ಮೂಲಕ ಸೆಣಸಾಡಿದವು. ಸೆಮಿಫೈನಲ್ ಪಂದ್ಯದಲ್ಲಿ ಪತ್ರಕರ್ತರ ತಂಡವನ್ನು ಮಣಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡವನ್ನು ಸೋಲಿಸಿದ ಕಾವೇರಿ ನೀರಾವರಿ ನಿಗಮ ತಂಡಗಳು ಫೈನಲ್ ಪ್ರವೇಶಿಸಿ ಗಮನಾರ್ಹ ಪ್ರದರ್ಶನ ನೀಡಿದವು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾವೇರಿ ನೀರಾವರಿ ನಿಗಮದ ತಂಡ ನಿಗದಿತ ನಾಲ್ಕು ಓವರ್‌ಗಳಲ್ಲಿ 33 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಡಿದ ಅಗ್ನಿಶಾಮಕ ದಳದ ಆಟಗಾರರು 6 ರನ್‌ಗಳಿಂದ ಸೋಲನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು. ವಿಜೇತ ತಂಡಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್ ಹಾಗೂ ಕೆರಗೋಡು ಸೋಮಶೇಖರ್ ಬಹುಮಾನ ವಿತರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್ ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ತಾಲೂಕು ಅಧ್ಯಕ್ಷ ಆರ್.ಸೋಮಶೇಖರ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು.