ಶ್ರೀರಂಗಪಟ್ಟಣದಲ್ಲಿ ವಿದೇಶಿಗರಿಗೆ ಸತ್ಕಾರ

ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ವಿದೇಶಿ ಅತಿಥಿಗಳು ಭೇಟಿ ನೀಡಿ ವೀಕ್ಷಿಸಿದರು.
IMG-20230802-WA0006
Published on

ಶ್ರೀರಂಗಪಟ್ಟಣ: ಮೈಸೂರಿನಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಗೆ ಆಗಮಿಸಿರುವ ವಿದೇಶಿ ಅತಿಥಿಗಳು ಬುಧವಾರ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ಪಟ್ಟಣಕ್ಕೆ ಸಮೀಪದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ 5 ವಿಶೇಷ ಬಸ್‌ಗಳಲ್ಲಿ ಬಿಗಿ ಭದ್ರತೆಯೊಂದಿಗೆ ಬಂದಿಳಿದ 150ಕ್ಕೂ ಹೆಚ್ಚು ವಿದೇಶಿ ಅತಿಥಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಪೂರ್ಣಕುಂಭ ಕಲಶಗಳನ್ನು ಹೊತ್ತ ಮಹಿಳೆಯರು ವಿದೇಶಿಗರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.


ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ 8 ಗೈಡ್‌ಗಳನ್ನು ಅತಿಥಿಗಳಿಗೆ ಅಗತ್ಯ ಮಾಹಿತಿ ನೀಡಲು ನಿಯೋಜಿಸಲಾಗಿತ್ತು. ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಸ್ಮಾರಕಗಳು, ಅರಮನೆ, ತೈಲವರ್ಣದ ಕಲಾಕೃತಿಗಳನ್ನು ವೀಕ್ಷಿಸಿದ ಅತಿಥಿಗಳು ಅವುಗಳ ಐತಿಹಾಸಿಕ ಮಹತ್ವವನ್ನು ಕೇಳಿ ತಿಳಿದುಕೊಂಡರು.


ದೀಪಾಲಂಕಾರ: ಹಲವು ದೇಶಗಳಿಂದ ಆಗಮಿಸಿದ್ದ ಅತಿಥಿಗಳ ಆಗಮನದ ಹಿನ್ನೆಲೆ ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅತಿಥಿಗಳು ಸಾಗುವ ಮಾರ್ಗದುದ್ದಕ್ಕೂ ಶ್ರೀರಂಗಪಟ್ಟಣದ ಐತಿಹಾಸಿಕ ಮಹತ್ವವನ್ನು ಪರಿಚಯಿಸಲಾಯಿತು.


ಪಟ್ಟಣದಲ್ಲಿನ ಶ್ರೀ ಆದಿರಂಗನಾಥಸ್ವಾಮಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದ ಅತಿಥಿಗಳಿಗೆ ದೇವಾಲಯದ ವತಿಯಿಂದ ಪ್ರವೇಶ ದ್ವಾರದಲ್ಲೇ ಗೌರವ ಸಲ್ಲಿಸಿ ನಂತರ ತೆರಳುವಾಗಲೂ ಸಾಂಪ್ರದಾಯಿಕವಾಗಿ ಸತ್ಕರಿಸಿ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net