

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಸಜ್ಜಾಗಿದ್ದು, ಲಕ್ಷ ದೀಪೋತ್ಸವಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಪಟ್ಟಣದ ಶ್ರೀಆದಿರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ 33ನೇ ವರ್ಷದ ಲಕ್ಷ ದೀಪೋತ್ಸವ ಆಚರಿಸಲಾಗುತ್ತಿದ್ದು, ಲಕ್ಷ ದೀಪೋತ್ಸವ ಸಮಿತಿಯಿಂದ ಇದಕ್ಕಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ಮುಂಭಾಗ 2 ಬೃಹತ್ ವೃತ್ತಗಳಲ್ಲಿ ವರ್ಣರಂಜಿತ ದೀಪಗಳ ಅಲಂಕಾರ ಜತೆಗೆ ಮುಂದಿನ ರಸ್ತೆಯ 300 ಮೀ. ಉದ್ದಕ್ಕೂ ಎರಡೂ ಇಕ್ಕೆಲಗಳಲ್ಲಿ ಕಂಬಗಳ 10 ಸಾಲುಗಳು ಹಾಗೂ ನೆಲದ ಮೇಲೆ 8 ಸಾಲುಗಳಲ್ಲಿ ದೀಪಗಳನ್ನು ಇಡಲು ದಬ್ಬೆಗಳ ಸಹಾಯದಿಂದ ಅಟ್ಟಣೆಗಳನ್ನು ಕಟ್ಟಲಾಗಿದೆ. ಇದರೊಂದಿಗೆ ಗಂಡಭೇರುಂಡ ವೃತ್ತವನ್ನು ಸಹ ಶುಚಿತ್ವದೊಂದಿಗೆ ಸಿದ್ಧಗೊಳಿಸಲಾಗಿದೆ.
ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದಲೇ ಲಕ್ಷಾಂತರ ದೀಪಗಳನ್ನು ಸಾಲಾಗಿ ಜೋಡಿಸಲು ಅವಶ್ಯವಿರುವ ಹಸುವಿನ ಸಗಣಿ ಸಂಗ್ರಹಿಸಿದ್ದು, ಭಕ್ತರು, ದಾನಿಗಳು ಹಾಗೂ ಪುರಜನರು ಲಕ್ಷಗಟ್ಟಲೆ ದೀಪಗಳು ಹಾಗೂ ಅದಕ್ಕೆ ಬೇಕಾಗುವ 70 ಟಿನ್ ದೀಪದ ಎಣ್ಣೆಯನ್ನು ತರಲಾಗಿದೆ. ಈ ದೀಪಗಳನ್ನು ಸಾಲಾಗಿ ಜೋಡಿಸುವ ಹಾಗೂ ಎಣ್ಣೆ ಹಾಕುವ ಪ್ರಕ್ರಿಯೆ ಮತ್ತು ನಿರ್ವಹಣೆಗೆ ಲಕ್ಷ ದೀಪೋತ್ಸವ ಸಮಿತಿಯ ಸದಸ್ಯರು, ಅಭಿನವ ಭಾರತ್, ವಿದ್ಯಾ ಭಾರತಿ, ಚೈತನ್ಯ ದಳ ಹಾಗೂ ಪಟ್ಟಣದ ಒಟ್ಟು 100 ಸ್ವಯಂಸೇವಕರ ತಂಡ ಪಾಲ್ಗೊಳ್ಳುತ್ತಿದೆ.
ಸಂಕ್ರಾಂತಿ ದಿನದ ಸಂಜೆ ಗೋಧೂಳಿ ಲಗ್ನದಲ್ಲಿ ಪ್ರಥಮವಾಗಿ ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಪಠಣದೊಂದಿಗೆ, ವೈಕುಂಠ ದ್ವಾರ ತೆರೆದು ಬಳಿಕ ಸ್ವಾಮಿಗೆ ನವನೀತ ಅಲಂಕಾರ ಅರ್ಪಿಸಿ ದೀಪ ಬೆಳಗಲು ಚಾಲನೆ ನೀಡಲಾಗುವುದು.