

ಶ್ರೀರಂಗಪಟ್ಟಣ: ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಉತ್ತರಪ್ರದೇಶ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಕಾವೇರಿ-ಗಂಗಾ ಸಂಗಮ ರಾಷ್ಟ್ರೀಯ ಕಲಾ ಶಿಬಿರದಲ್ಲಿ ನುರಿತ ಚಿತ್ರಕಲಾವಿದರು ಕುಂಚಗಳಲ್ಲಿ ಬಿಡಿಸಿದ ವರ್ಣರಂಜಿತ ಚಿತ್ರಗಳು ಗಮನ ಸೆಳೆದವು.
ಪಟ್ಟಣ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ 4 ದಿನಗಳ ಕಾಲ ಆಯೋಜಿಸಿರುವ ಚಿತ್ರಕಲಾ ಶಿಬಿರವನ್ನು ಉತ್ತರಪ್ರದೇಶದ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಸೀತಾರಾಮ ಕಶ್ಯಪ್ ಅವರು ಚಿತ್ರ ಬರೆಯುವ ಮೂಲಕ ಉದ್ಘಾಟಿಸಿದರು.
ಗಂಗಾ-ಕಾವೇರಿ ಜೋಡಣೆಯಂಥ ವಿಚಾರ ದೃಷ್ಟಿಕೋನವನ್ನು ಮುಂದಿಟ್ಟು ಕರ್ನಾಟಕ ಮತ್ತು ಉತ್ತರಪ್ರದೇಶದ ಆಚಾರ-ವಿಚಾರ, ಸಂಸ್ಕೃತಿಯನ್ನು ಚಿತ್ರಕಲೆ ಮೂಲಕ ವಿನಮಯ ಮಾಡಿಕೊಳ್ಳುವ ಶಿಬಿರ ಇದಾಗಿದ್ದು, ರಾಜ್ಯ ಹಾಗೂ ಉತ್ತರಪ್ರದೇಶದ ತಲಾ 10 ಕಲಾವಿದರು ಭಾಗಿಯಾಗಿದ್ದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಹಿರಿಯ ಸಮಾಜ ಸೇವಕ ಪಾ.ರಾ.ಕೃಷ್ಣಮೂರ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕದ ಅಕಾಡೆಮಿ ಸದಸ್ಯರಾದ ವಿನೋದ್ ಕುಮಾರ್, ರಮೇಶ್ ಚವ್ಹಾಣ್, ಎಂ.ಎನ್.ಮೂರ್ತಿ, ವೀರೇಶ್ ಇದ್ದರು.