

ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಚಿತ್ರದುರ್ಗದ ಪಾಳೇಗಾರ ವೀರಮದಕರಿ ನಾಯಕರ ಸ್ಮಾರಕ ನಿರ್ಮಿಸುವ ಜತೆಗೆ ನಾಡಿನ ಜನರಿಗೆ ಅವರ ಕುರಿತ ನೈಜ ಇತಿಹಾಸ ತಿಳಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ವಿಜಯನಗರದ ಹಡಗಲಿ ಹಾಲಶ್ರೀ ಸಂಸ್ಥಾನ ಮಠದ ಪೀಠಾಧಿಪತಿ ಅಭಿನವ ಹಾಲಶ್ರೀ ಒತ್ತಾಯಿಸಿದರು.
ಪಟ್ಟಣ ಹೊರವಲಯದ ಪಶ್ಚಿಮವಾಹಿನಿಯ ಕಾವೇರಿ ತೀರದಲ್ಲಿ ಗುರುವಾರ ನಾಯಕ ಸಮುದಾಯ, ಮಂಡಲ ಬಿಜೆಪಿ ಹಾಗೂ ವಿವಿಧ ಹಿಂದು ಪರ ಸಂಘಟನೆಗಳು ಆಯೋಜಿಸಿದ್ದ ಚಿತ್ರದುರ್ಗದ ಪಾಳೇಗಾರ ವೀರ ಮದಕರಿನಾಯಕರ 243ನೇ ಪುಣ್ಯ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ನಾಡಿನ ಚರಿತೆಯಲಿ ವೀರ ಮದಕರಿನಾಯಕರ ಪಾತ್ರ ಹಾಗೂ ಕೊಡುಗೆಗಳು ಅತ್ಯಂತ ಮಹತ್ವ ಪೂರ್ಣದ್ದಾಗಿದೆ. ಅಪ್ಪಟ ಕನ್ನಡಿಗರಾದ ಪಾಳೇಗಾರ ನಾಯಕನ್ನು ಮೋಸದಿಂದ ಸೆರೆ ಹಿಡಿದು ವಿಷಪ್ರಾಶನದ ಮೂಲಕ ಸಾಯಿಸಿ ಬಳಿಕ ಕಾವೇರಿ ತೀರದಲ್ಲಿ ಅವರನ್ನು ಶರೀರವನ್ನು ಸುಡಲಾಯಿತು. ಹೀಗಾಗಿ ಪಶ್ಚಿಮವಾಹಿನಿಯ ಈ ಪುಣ್ಯಭೂಮಿಯಲ್ಲಿ ನಮ್ಮ ನಾಯಕರ ಸ್ಮಾರಕ ನಿರ್ಮಿಸುವಂತೆ ವಿವಿಧ ಸಂಘಟನೆಗಳೋಂದಿಗೆ ನಾಯಕ ಸಮುದಾಯ ಸಾಕಷ್ಟು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರು. ರಾಜ್ಯದ ಗದ್ದುಗೆ ಏರುವ ಸರ್ಕಾರಗಳು ನಿರ್ಲಕ್ಷಿಸುತ್ತಲ್ಲೇ ಬಂದಿವೆ. ಇಂತಹ ಮಹನೀಯರ ಸ್ಮರಣೆಗಾಗಿ ಎಲ್ಲ ಹಿಂದುಗಳು ಧನಿ ಎತ್ತಬೇಕು ಎಂದು ಮನವಿ ಮಾಡಿದರು.
ನಿವೃತ್ತ ಯೋಧ ಹಾಗೂ ಮೈಸೂರಿನ ವಕೀಲ ದೇವರಾಜ ಪಾಳೇಗಾರ ಮದಕರಿನಾಯಕರು 18ನೇ ಶತಮಾನದಲ್ಲಿಯೇ ಗೆರಿಲ್ಲಾ ಯುದ್ದ ನುರಿತ 20 ಸಾವಿರ ಸೈನಿಕರ ಬೇಡರ ಪಡೆಯನ್ನು ಹೊಂದಿದ್ದರು. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಭಾರತೀಯ ಸೈನ್ಯದಲ್ಲಿರುವ ಗೆರಿಲ್ಲಾ ರೆಜಿಮೆಂಟ್‌ನಲ್ಲಿ ಬೇಡರ ರೆಜಿಮೆಂಟ್ ಎಂಬುದನ್ನು ಸ್ಥಾಪಿಸಿ ಗೌರವ ನೀಡಬೇಕು ಎಂದರು.
ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಚಂದನ್ ಮಾತನಾಡಿ, ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದಲ್ಲಿ ವೈಭವೀಕರಣದ ಕಥೆಗಳ ಮುಂದೆ ಜನರ ಅರಿವಿಗೆ ಬಾರದ ಸಾಕಷ್ಟು ಸತ್ಯ ಸಂಗತಿಗಳು ಹುದುಗಿಹೋಗಿವೆ. ನಾಡಿನ ಹೆಮ್ಮೆಯ ಕನ್ನಡಿಗ ಪಾಳೇಗಾರ ವೀರ ಮದಕರಿನಾಯಕರ ಇತಿಹಾಸ ತಿಳಿಸಲು ರಾಜ್ಯ ಸರ್ಕಾರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವ ಸಾಧಕರಿಗೆ ವೀರ ಮದಕರಿ ನಾಯಕರ ಹೆಸರಲ್ಲಿ ಪ್ರಶಸ್ತಿ ಪುರಸ್ಕಾರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕು ಮೊದಲು ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ 2.5 ಕಿಮಿ ದೂರದ ಪಶ್ಚಿಮವಾಹಿನಿಯವರೆಗೂ ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ಮಂಡ್ಯ, ಲಿಂಗಸೂರು, ಹಾಸನ, ತುಮಕೂರು, ಚಿತ್ರದುರ್ಗ, ಬೆಂಗಳೂರಿನಿಂದ ಆಗಮಿಸಿದ್ದ ವಿವಿಧ ಸಂಘಟನೆಗಳೊಂದಿಗೆ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಮದಕರಿನಾಯಕರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಲಾಯಿತು.
ಪಟ್ಟಣ ಪುರಸಭೆಯ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯರಾದ ಗಂಜಾಂ ಕೃಷ್ಣಪ್ಪ, ಎಸ್.ಟಿ.ರಾಜು, ಶ್ರೀನಿವಾಸ್, ಚಿತ್ರದುರ್ಗದ ಮದಕರಿನಾಯಕ ಬಳಗದ ಸಂಚಾಲಕ ಪ್ರಸನ್ನ ಧರ್ಮಜಾಗೃತಿ, ಸಮುದಾಯದ ಮುಖಂಡ ಚಿತ್ರದುರ್ಗದ ಮಾರಣ್ಣ ಪಾಳೇಗಾರ, ತಮಕೂರಿನ ಹಿಂದು ರಾಷ್ಟ್ರ ಸಮಿತಿ ಸಂಚಾಲಕ ಮಂಜು ಭಾರ್ಗವ್, ಧನುಷ್, ಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು ಮಂಡ್ಯ, ಗೋಸೇವಾ ರಾಜ್ಯ ಸಮಿತಿ ಸಂಚಾಲಕ ಮಂಜುನಾಥ್ ಮಳವಳ್ಳಿ, ಅಜಾದ್ ಬ್ರಿಗೇಡ್‌ನ ಸುರೇಶ್ ಚನ್ನಪಟ್ಟಣ, ಬೆಂಗಳೂರಿನ ಹಿಂದವಿ ಮಾರ್ಟ್ ಮುನಿಗೌಡ, ಹಿಂಜಾವೇ ಪ್ರಾಂತ ವಕೀಲ ಬಾಲರಾಜು, ಬಿಜೆಪಿ ಟೌನ್ ಮಾಜಿ ಅಧ್ಯಕ್ಷ ಸುನೀಲ್, ತಾಲೂಕು ಸಂಯೋಜಕ ಹರ್ಷ, ಸತೀಶ್, ಚಂದ್ರು, ರವಿಕಿರಣ್, ಪಿ.ರಾಘು, ಪಟ್ಟಣದ ನಾಯಕ ಸಮುದಾಯದ ದೊಡ್ಡಯಜಮಾನ ರಂಗಸ್ವಾಮಿ ನಾಯಕ, ಚಿಕ್ಕಯಜಮಾನ ಪೈ.ರಂಗಸ್ವಾಮಿ, ಸಮುದಾಯದ ಮುಖಂಡ ಶೇಖರ್ ಇತರರಿದ್ದರು.