ಶ್ರೀರಂಗಪಟ್ಟಣ ಸ್ನಾನಘಟ್ಟದಲ್ಲಿ ಛದ್ಮವೇಷ ಧರಿಸಿ ಪ್ರತಿಭಟನೆ

20230903_124840
ಶ್ರೀರಂಗಪಟ್ಟಣ ಸ್ನಾನಘಟ್ಟದಲ್ಲಿ ಭಾನುವಾರ ರೈತರ ಮಕ್ಕಳು ವಿವಿಧ ಛದ್ಮ ವೇಷಗಳನ್ನು ಧರಿಸಿ ಭೂಮಿ ತಾಯಿ ಹೋರಾಟಗಾರರ ಸಮಿತಿ ಕಾರ್ಯಕರ್ತರ ಕಾವೇರಿ ಹೋರಾಟ ಬೆಂಬಲಿಸಿ ಧರಣಿ ನಡೆಸಿದರು.
Published on

ಶ್ರೀರಂಗಪಟ್ಟಣ: ಕಾವೇರಿ ಹೋರಾಟ ಬೆಂಬಲಿಸಿ ಕಾವೇರಿ ಮಾತೆ, ಭುವನೇಶ್ವರಿ, ಕಿತ್ತೂರು ರಾಣಿ ಚನ್ನಮ್ಮ, ಮಂಡ್ಯ ಮಣ್ಣಿನ ರೈತನ ಛದ್ಮವೇಷ ಧರಿಸಿ ಚಿಣ್ಣರು ಭಾನುವಾರ ಪ್ರತಿಭಟನೆ ನಡೆಸಿದರು.


ಪಟ್ಟಣದ ಸ್ನಾನಘಟ್ಟದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಭಾಗವಹಿಸಿದ ಮಕ್ಕಳು, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.


ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾವೇರಿ ಕಣಿವೆಯ ಕೃಷಿ ಹಾಗೂ ರೈತರ ಜನರ ಉಳಿವಿಗಾಗಿ ಈ ಭಾಗದ ಅನ್ನದಾತರ ಮಕ್ಕಳು ಸಾಂಕೇತಿಕವಾಗಿ ದನಿ ಎತ್ತಿದ್ದು, ಮುಂದಿನ ಪೀಳಿಗೆಯ ಜನರ ಬದುಕಿಗೆ ವಿಷ ಉಣಿಸದಿರಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.


ಜೀವನದಿ ಕಾವೇರಿ ನೀರು ವಿಚಾರದಲ್ಲಿ ಯಾವುದೇ ಪ್ರತಿಷ್ಠೆ, ಪೈಪೋಟಿಯ ಹೋರಾಟ ಅಥವಾ ಪ್ರಚಾರದ ಇರಾದೆ ಇರದೆ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಜಾನುವಾರುಗಳ ಹಿತಾಸಕ್ತಿಗಾಗಿ ಮಕ್ಕಳು ಧ್ವನಿ ಎತ್ತಿ ಹೋರಾಟ ಆರಂಭಿಸಿದ್ದಾರೆ ಎಂದು ಹೇಳಿದರು.


ಪ್ರಜೆಗಳ ಹಿತಾಸಕ್ತಿಗಾಗಿ ಮೈಸೂರು ಮಹಾರಾಜರು ಕಟ್ಟಿಸಿದ ಕನ್ನಂಬಾಡಿ ಕಟ್ಟೆ ನೀರನ್ನು ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯ ‘ರಾಜಕಾರಣಿ ರಾಜರು’ ರಾಜಕೀಯ ಲಾಭಕ್ಕಾಗಿ ಹರಿಸುತ್ತಿರುವ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.


ಕಾವೇರಿ ಹೋರಾಟಕ್ಕೆ ಕೈಜೋಡಿಸಿದ ಪುಟಾಣಿಗಳಾದ ಆಕಾಶ್ ಹಾಗೂ ಚುಕ್ಕಿ ಮಾತನಾಡಿದರು.


ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಸಂಚಾಲಕ ಬಿ.ಮಂಜುನಾಥ್, ಸುನೀಲ್, ಬಾಬು, ಪೈ.ನಾಗಣ್ಣ, ಮಹಾಲಿಂಗು, ಸುರೇಶ್, ಮೊಳ್ಳೆನಹಳ್ಳಿಕೊಪ್ಪಲು ಚಂದ್ರು, ನೀಲನಕೊಪ್ಪಲು ಭದ್ರಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರವಿ ಲಕ್ಷ್ಮಣ, ಪುಟ್ಟಸ್ವಾಮಿ ಮಲ್ಲೇಗೌಡನಕೊಪ್ಪಲು, ಬಲ್ಲೇನಹಳ್ಳಿ ಮಹೇಶ್, ಹೆಬ್ಬಾಡಿಹುಂಡಿ ಸಿದ್ದೇಗೌಡ, ಕಡತನಾಳು ಚಾಮರಾಜು, ಬೆಳಗೊಳ ಸುನೀಲ್, ಕೆ.ಜಯರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net