ಶ್ರೀಮಠ ಧರ್ಮ, ನ್ಯಾಯ, ಜ್ಞಾನಪೀಠಗಳ ತ್ರಿವೇಣಿ ಸಂಗಮ

Sirigere
Published on

ಚಿತ್ರದುರ್ಗ: ಉತ್ತಮ ಗುರು ಪರಂಪರೆಯಿಂದಾಗಿ ಶ್ರೀಮಠವು ಧರ್ಮ, ನ್ಯಾಯ, ಜ್ಞಾನಪೀಠಗಳ ತ್ರಿವೇಣಿ ಸಂಗಮವಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಬಣ್ಣಿಸಿದರು.

ಸಿರಿಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32ನೇ ಪುಣ್ಯಸ್ಮರಣೆಯ ಸಮಾರೋಪದಲ್ಲಿ ಮಾತನಾಡಿದರು.

ಸಮಾಜಕ್ಕೆ ಶಿವಕುಮಾರ ಶ್ರೀ ಪ್ರೇರಣೆಯಾಗಿದ್ದಾರೆ. ಬದುಕಿನಲ್ಲಿ ಬಂದ ಸವಾಲುಗಳ ವಿರುದ್ಧ ದಿಟ್ಟವಾಗಿ ನಿಂತು ಬಡಜನರಿಗೆ ದಾರಿದೀಪವಾಗಿದ್ದಾರೆ. ಈಗಿನ ಶ್ರೀಗಳು ಜ್ಞಾನಪೀಠಕ್ಕಿಂತ ಅಗಾಧ ಜ್ಞಾನವುಳ್ಳವರಾಗಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಿರಿಗೆರೆ ಸದ್ಧರ್ಮ ನ್ಯಾಯಪೀಠ ವಿಶಾಲವಾಗಿದ್ದು, ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದುಡ್ಡಿನಿಂದ ಶ್ರೀಮಂತಿಕೆ ಅಳೆಯಲಾಗದು: ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಮಾತನಾಡಿ, ದುಡ್ಡಿನಿಂದ ಶ್ರೀಮಂತಿಕೆ ಅಳೆಯಲಾಗದು. ಭಕ್ತಿ ಇಲ್ಲದವ ಬಡವ. ಇರುವವ ನಿಜವಾದ ಶ್ರೀಮಂತ ಎಂದು ಹೇಳಿದರು.

ಕಾನೂನು ದೇಶಕ್ಕೆ ಸೀಮಿತ. ಆದರೆ, ಧರ್ಮ ಎಂದರೆ ಅದಕ್ಕೆ ಜಾತಿ ಇಲ್ಲ. ಅದು ವಿಶ್ವ ವ್ಯಾಪಿಯಾಗಿದೆ. ವ್ಯಕ್ತಿ ಸನ್ಮಾರ್ಗದಲ್ಲಿ ಸಾಗಲು ಸಮಾಜ, ಕಾನೂನು, ಆತ್ಮದ ಭಯ ಬೇಕು. ಸತ್ಯವಂತರು ಹೆದರಬೇಕಿಲ್ಲ. ಸುಳ್ಳಿಗೆ ಅನೇಕ ಬಣ್ಣಗಳಿದ್ದು, ಸತ್ಯಕ್ಕೆ ಒಂದೇ ಬಣ್ಣ ಎಂದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಎಂ. ಬಿದರಿ ಮಾತನಾಡಿ, ಶಿವಕುಮಾರ ಶ್ರೀ ಟೀಕೆ, ಟಿಪ್ಪಣಿ ಯಾವುದಕ್ಕೂ ಅಂಜಲಿಲ್ಲ. ತಮ್ಮ ಮಾರ್ಗದಲ್ಲಿ ದೃಢ ಹೆಜ್ಜೆ ಇಟ್ಟು ರಾಜ್ಯ-ದೇಶಕ್ಕೆ ಮಾದರಿ ಮಠವನ್ನಾಗಿ ಮಾಡಿದರು. ಹೀಗಾಗಿ ಅವರು ಸರ್ವಕಾಲಕ್ಕೂ ಪ್ರಸ್ತುತ ಎಂದು ಬಣ್ಣಿಸಿದರು.

ಮಠದ ಕುರಿತು ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ ಶ್ರೀಮಠದ ಭಕ್ತರ ಸಂಘಟನೆ, ಸಂಕಲ್ಪ, ವೈಚಾರಿಕ ಚಿಂತನೆ ದಿನೇ ದಿನೆ ಬಲಿಷ್ಠವಾಗುತ್ತಿದೆ. ಭಕ್ತರೇ ಮಠದ ಆಸ್ತಿ. ಮಠದ ಎಲ್ಲ ಭಿನ್ನಾಭಿಪ್ರಾಯಗಳು ದೂರಾಗಿ ಮುಂದಿನ 33ನೇ ಶ್ರೀಗಳ ಪುಣ್ಯಸ್ಮರಣೆ ಎಲ್ಲರೂ ಒಂದಾಗಿ ಸೇರಿ ಆಚರಿಸುವಂತಾಗಲಿ ಎಂದರು.

ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ಧೇಶ್ವರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣವಾದ ಅಗೋಚರ ಶಕ್ತಿ ಶಿವಕುಮಾರ ಶ್ರೀ. ಸಿರಿಗೆರೆ ಮಠ ಅನ್ನ-ಜ್ಞಾನ ದಾಸೋಹಕ್ಕೆ ಹೆಸರಾಗಿದೆ. ಮೌಢ್ಯ, ಕಂದಾಚಾರದ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಚೇತನ ಎಂದು ಸ್ಮರಿಸಿಕೊಂಡರು.

ಡಾ.ಶ್ರೀಗಳು ಉಬ್ರಾಣಿ, ಸಾಸ್ವೆಹಳ್ಳಿ, ಭರಮಸಾಗರ, ಜಗಳೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಹಸನಾಗಿಸಿದ್ದಾರೆ. ದುಗ್ಗಾಣಿ ಮಠ ಶ್ರೀಮಂತವಾಗಿ ಬೆಳೆಯಲು ಭಕ್ತರೇ ಕಾರಣ. ಜೀವಿತಾವಧಿವರೆಗೂ ಅವರೇ ಗುರುವಾಗಿ ಮುಂದುವರಿಯಬೇಕು ಎಂದರು.

ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಜಾತ್ಯತೀತವಾಗಿ ಸಹಪಂಕ್ತಿ ಭೋಜನಾ, ವೈಚಾರಿಕಾ ಕ್ರಾಂತಿ ಮೂಲಕ ಶಿವಕುಮಾರ ಶ್ರೀ ಧೀರ ಸನ್ಯಾಸಿಯಾದರು. ಈಗಿನ ಶ್ರೀಗಳು ಫಸಲ್ ಬೀಮಾ ಯೋಜನೆ ಹಣ ಜಮೆಯಾಗದ ರೈತರ ಸಮಸ್ಯೆ ಬಗೆಹರಿಸಿದರು. ರೈತರು ಅಡಿಕೆ ತೋಟಗಳನ್ನು ನಿರ್ಮಿಸಿ ಆರ್ಥಿಕವಾಗಿ ಸಬಲರಾಗಲು ಏತನೀರಾವರಿ ಯೋಜನೆಗಳೇ ಕಾರಣ. ಮಠದ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವ ಕೆಲವರಿಗೆ ಉತ್ತರ ಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದರು.

ನೀರಾವರಿ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಮಾತನಾಡಿ, ಲಿಂ. ಶಿವಕುಮಾರ ಶ್ರೀಗಳ ಪ್ರತಿ ಶ್ರದ್ಧಾಂಜಲಿಗೂ ಒಂದೊಂದು ಏತನೀರಾವರಿ ಯೋಜನೆ ಲೋಕಾರ್ಪಣೆ ಮಾಡುವ ಸಂಕಲ್ಪವಾಗಬೇಕು ಎಂದರು.

ತುಂಗಭದ್ರಾ ಡ್ಯಾಂನಿಂದ 100 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಹಂಚಿಕೆ ಇದ್ದರೂ ಆ ನೀರನ್ನು ಬಳಸಿಕೊಳ್ಳಲು ಯಾವ ಅಭ್ಯಂತರವಿಲ್ಲ. ಶಿವಮೂರ್ತಿ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿ, ಕರ್ನಾಟಕದ ಎಲ್ಲ ಕೆರೆಗಳಿಗೂ ನೀರುಣಿಸುವ ಯೋಜನೆಗಳ ಸಂಬಂಧ ಇಂಜಿನಿಯರ್‌ಗಳಿಗೆ ಬೆನ್ನೆಲುಬಾಗಿ ನಿಲ್ಲಲ್ಲಿ ಎಂದು ಮನವಿ ಮಾಡಿದರು.

ಇದೇ ವೇಳೆ ಶಿವರಾಜ್ ವಿ. ಪಾಟೀಲ್ ಅವರು ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಆತ್ಮನಿವೇದನೆ, ಸಂಕಲ್ಪ, ಹಿಂದಿ ಭಾಷೆಗೆ ಅನುವಾದವಾಗಿರುವ ಅಕ್ಕಮಹಾದೇವಿ ಕೆ ವಚನ್, ಅಲ್ಲಮಪ್ರಭು ಕೆ ವಚನ್ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಉದ್ಯಮಿಗಳಾದ ರಾಜು ಪಾಟೀಲ್, ದಾವಣಗೆರೆ ಶ್ರೀನಿವಾಸ್ ಶಿವಗಂಗಾ, ಸಾವಿತ್ರಿ ರೆಡ್ಡಿ, ನೀರಾವರಿ ಅಭಿವೃದ್ಧಿ ನಿಗಮದ ಅಭಿಯಂತರರಾದ ಯತೀಶ್ ಚಂದ್ರ, ಶಿವಾನಂದ್, ನಾಗರಾಜ್ ಪಾಟೀಲ್, ಬಿ.ಸುರೇಶ್, ಮಂಜುನಾಥ್, ರಾಜೇಂದ್ರ ಪ್ರಸಾದ್, ಪ್ರಸನ್ನ, ಪ್ರವೀಣ್, ತಿಪ್ಪೇಶ್, ಶಂಕರಪ್ಪ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net