ಶ್ರೀಮಂತವಾದ ಜಾನಪದ ಸಂಸ್ಕೃತಿ ಉಳಿಸಿ

03 Tth 01
ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ವಿದ್ಯಾರ್ಥಿಗಳು ಸಿದ್ದಪಡಿಸಿದ ಆಹಾರ ಪ್ರದರ್ಶನ ನಡೆಯಿತು. ಆರಗ ಜ್ಞಾನೇಂದ್ರ, ಯೋಗೀಶ್, ಪ್ರೊ.ಸೌಮ್ಯಾ, ಡಾ.ದಿವ್ಯಾಮಣಿ, ವಿಜಯೇಂದ್ರ, ದಿವಾಕರ್, ಯೋಗೀಶ್ ಇದ್ದರು.
Published on

ತೀರ್ಥಹಳ್ಳಿ: ವೈಜ್ಞಾನಿಕವಾದ ಆಧುನಿಕ ಕಾಲಘಟ್ಟದಲ್ಲಿರುವ ನಾವುಗಳು ಆಧುನಿಕತೆಯ ಹಪಾಹಪಿಯಿಂದ ನಮ್ಮ ಮೂಲ ಪರಂಪರೆ ಮರೆಯದೆ ಶ್ರೀಮಂತವಾದ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಾನಪದ ಉತ್ಸವ-2025 ಸಾಂಸ್ಕೃತಿಕ ಮೇಳ ಉದ್ಘಾಟಿಸಿ, ನಾಲ್ಕು ಗೋಡೆಗಳ ನಡುವೆ ನಡೆಯುವ ಪಠ್ಯಕ್ರಮಗಳ ಜತೆಯಲ್ಲಿ ವಿಶ್ವಜ್ಞಾನವನ್ನು ಅರಿಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಚಿಂತನೆ ಅಗತ್ಯ. ವಿದ್ಯಾರ್ಥಿಗಳಿಗೆ ಜಾನಪದ ಜೀವನ ಶೈಲಿಯ ಕೃಷಿ ಉಪಕರಣಗಳು, ಉಡುಗೆ ತೊಡುಗೆ ತಿಂಡಿತಿನಿಸುಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಜಾನಪದ ಮೇಳ ಅರ್ಥಪೂರ್ಣವಾಗಿದ್ದು ಗಮನ ಸೆಳೆಯುವಂತಿದೆ ಎಂದರು.

ಭವಿಷ್ಯದ ಆಶಾಕಿರಣಗಳಾದ ಯುವಜನತೆ ಆಧುನಿಕತೆಯ ಹಪಾಹಪಿಯಲ್ಲಿ ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ನಮ್ಮ ಪೂರ್ವಿಕರ ಬಾಳಿ ಬದುಕಿದ ಜೀವನ ಶೈಲಿ ಮತ್ತು ಅವರ ಬಳುವಳಿ ಗಮನದಲ್ಲಿಟ್ಟುಕೊಂಡು ನೀತಿ ನಡವಳಿಕೆಯೊಂದಿಗೆ ಜ್ಞಾನ ಸಂಪಾದಿಸುವ ಗುರಿ ಹೊಂದಬೇಕು. ಕನ್ನಡನಾಡಿನ ಜಾನಪದೀಯ ಪರಂಪರೆ ಅತ್ಯಂತ ಶ್ರೀಮಂತವಾಗಿರುವುದು ಮಾತ್ರವಲ್ಲದೇ ಭವಿಷ್ಯದ ಮಾರ್ಗಸೂಚಿಯೂ ಆಗಿದೆ ಎಂದರು.

ಕಾಲೇಜು ಸಲಹಾ ಸಮಿತಿ ಸದಸ್ಯ ಯೋಗೀಶ್, ಪ್ರಾಚಾರ್ಯರಾದ ಪ್ರೊ.ಸೌಮ್ಯಾ, ಉಪನ್ಯಾಸಕರಾದ ಡಾ.ದಿವ್ಯಾಮಣಿ, ವಿಜಯೇಂದ್ರ, ದಿವಾಕರ್, ಯೋಗೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net