ಶ್ರೀಮಂತರಿಗೆ ಅಮೃತ, ಬಡವರಿಗೆ ವಿಷ: ಮಾರಸಂದ್ರ ಮುನಿಯಪ್ಪ

ಶ್ರೀಮಂತರಿಗೆ ಅಮೃತ, ಬಡವರಿಗೆ ವಿಷ: ಮಾರಸಂದ್ರ ಮುನಿಯಪ್ಪ
Published on

ಹಾಸನ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೂಡ ಇಂದಿಗೂ ಶ್ರೀಮಂತರಿಗೆ ಅಮೃತ, ಬಡವರಿಗೆ ವಿಷ ನೀಡಲಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕಾರ್ಮಿಕರು ಇಂದಿಗೂ ಕೂಡ ಸಂಕಷ್ಟದಲ್ಲಿದ್ದಾರೆ. ಇವರನ್ನು ಮೇಲೆತ್ತುವ ಕೆಲಸವನ್ನು ಯಾವ ಸರ್ಕಾರಗಳೂ ಕೂಡ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಎಸ್‌ಪಿ ದೊಡ್ಡ ಪಕ್ಷಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ. ನಮ್ಮ ಪಕ್ಷ ದೇಶಕ್ಕೆ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಣ್ಣ ಸಮುದಾಯಗಳ 90 ಕೋಟಿ ಜನರಿದ್ದಾರೆ. ಆದರೂ ಅಧಿಕಾರ ಮಾತ್ರ ಮೇಲ್ವರ್ಗದ ಶ್ರೀಮಂತರ ಪಾಲಾಗಿದೆ. ನಾವೆಲ್ಲರೂ ಸಂಘಟಿತರಾಗುವ ಮೂಲಕ ಅಧಿಕಾರ ಹಿಡಿದು ದೇಶವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಮೂಲಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದೇಶದಲ್ಲಿ ಅತೀ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಅವರು ಸ್ಥಳ, ಸಮುದಾಯ ಹಾಗೂ ಬಡವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಯಾವುದೇ ರೀತಿಯ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರದೆ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇನ್ನು ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಕೇವಲ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೂಡ ನಿರುದ್ಯೋಗ, ಬಡತನ, ವಸತಿ ಸಮಸ್ಯೆ, ಜಾತಿ ಜಾತಿಗಳ ನಡುವೆ ಸಂಘರ್ಷ, ಧರ್ಮ ಧರ್ಮಗಳ ನಡುವೆ ಗಲಾಟೆಗಳನ್ನು ಮಾಡಿಸುತ್ತಾ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಂದಿಗೂ ಕೂಡ ಸಮಾಜದಲ್ಲಿ ಅತ್ಯಂತ ಕಡುಬಡವರಾಗಿ ಉಳಿದುಕೊಂಡಿದ್ದಾರೆ ಎಂದರು.

ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ನಮಗೆಲ್ಲರಿಗೂ ಆಧಾರಸ್ತಂಭ ಸಂವಿಧಾನ. ಅದನ್ನೇ ಅಲುಗಾಡಿಸುವ ಕೆಲಸವನ್ನು ಕೆಲವರು ಮಾಡಲು ಯತ್ನಿಸುತ್ತಿದ್ದಾರೆ. ಸಂವಿಧಾನ ಅಪಮಾನ ಮಾಡುವ ಕೆಲಸಗಳು ಆಗುತ್ತಿವೆ. ಆದ್ದರಿಂದ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಪರಿಶಿಷ್ಟರು ಮತ್ತು ಪರಿಶಿಷ್ಟ ವರ್ಗದವರಿಗೆ ಅಧಿಕಾರವನ್ನು ನೀಡಲು ಬಯಸುವುದಿಲ್ಲ. ಹಾಗಾಗಿ ನಮ್ಮ ಸಮಾಜ ಇಂದಿಗೂ ಕೂಡ ತೀವ್ರ ಸಂಕಷ್ಟದಲ್ಲಿದೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಬಿಎಸ್‌ಪಿ ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಸಂಯೋಜಕ ಹಾಗೂ ಉಸ್ತುವಾರಿ ಎಂ.ಕೃಷ್ಣಮೂರ್ತಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ಮುಖಂಡರಾದ ಆರ್.ಮುನಿಯಪ್ಪ, ಜಾಕೀರ್ ಹುಸೇನ್, ಶಿವಮ್ಮ, ಚಿನ್ನಪ್ಪ ಚಿಕ್ಕಹಾಗಡೆ, ಜಾಕೀರ್ ಅಲಿಖಾನ್, ಸುಧಾ, ಲಕ್ಷ್ಮಣ್ ಕೀರ್ತಿ, ರಾಧಾಕೃಷ್ಣ, ಶಿವಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net