

ಕಳಸ: ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕರ್ನಾಟಕ ನಮ್ಮ ಹೆಮ್ಮೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಹೇಳಿದರು.
ತಾಲೂಕು ಆಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ನಿತ್ಯ ಹರಿದ್ವರ್ಣದಂತೆ ಉಸಿರಾಡಬೇಕಾದರೆ ಭಾಷೆ ಬಳಸಿ ಬೆಳೆಸಿದರೆ ಮಾತ್ರ ಸಾಧ್ಯ. ನಾಡು, ನುಡಿಗಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ. ಇದು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಗಬೇಕು. ನಮ್ಮಲ್ಲೂ ಇದು ಕಾರ್ಯರೂಪಕ್ಕೆ ಬರಬೇಕು. ಇದನ್ನು ಆಡಳಿತ ಮಂಡಳಿ ಪರಿಶೀಲಿಸಬೇಕು ಎಂದರು.
69 ವರ್ಷ ಕಳೆದರೂ ಕನ್ನಡ ಧ್ವಜ ಅಧಿಕೃತವಾಗದೆ ಇರುವುದು ಬೇಸರದ ಸಂಗತಿ. ಕನ್ನಡ ಭಾಷೆ ಬಳಕೆಯಿಂದ ಮಾತ್ರ ಬೆಳೆಯುತ್ತದೆ. ಸಹಾನುಭೂತಿಯಿಂದಾಗಲೀ, ಅನುಕಂಪದಿಂದಾಗಲೀ ಯಾವುದೇ ಭಾಷೆ ಬೆಳೆಯುವುದಿಲ್ಲ ಎಂದು ಹೇಳಿದರು.
ತಹಸೀಲ್ದಾರ್ ಎಸ್.ಶಾರದಾ ಮಾತನಾಡಿ, ಕನ್ನಡವನ್ನು ಕಟ್ಟುವಲ್ಲಿ ಸಾಕಷ್ಟು ಮಹನೀಯರು ಹೋರಾಡಿದ್ದಾರೆ. ಈ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ನಾವು ಪಣತೊಡಬೇಕಾಗಿದೆ ಎಂದು ಹೇಳಿದರು.
ವಿವಿಧ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ ಇತರರಿದ್ದರು.