ಶ್ರೀಮಂತ ಸಂಸ್ಕೃತಿ ಮೇಲೆ ದಾಳಿ

  ಕೊಡವ ರೈಡರ್ಸ್ ಕ್ಲಬ್ ತಂಡದಿಂದ ಕೋಣಂಗೇರಿಯಲ್ಲಿ ವನಮಹೋತ್ಸವ ನಡೆಯಿತು.
ಕೊಡವ ರೈಡರ್ಸ್ ಕ್ಲಬ್ ತಂಡದಿಂದ ಕೋಣಂಗೇರಿಯಲ್ಲಿ ವನಮಹೋತ್ಸವ ನಡೆಯಿತು.
Published on

ಕೊಡಗು: ಜಿಲ್ಲೆಯ ಶ್ರೀಮಂತ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದ್ದು, ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೊಡವರು ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಿ ಹೋಗಬೇಡಿ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ಹೇಳಿದರು.


ಕೊಡವ ರೈಡರ್ಸ್ ಕ್ಲಬ್ ನೇತೃತ್ವದಲ್ಲಿ ಬಾಂಡಿಂಗ್ ಬ್ಲೂಮ್ಸ್ ಕೊಡಗು ಸಂಸ್ಥೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಸಹಯೋಗದಲ್ಲಿ ಕೋಣಂಗೇರಿ ತುಪ್ಪನಾಣಿ ಭಗವತಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವನಮಹೋತ್ಸವ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.


ಜಿಲ್ಲೆಯ ಪರಿಸ್ಥಿತಿ ಹಿಂದಿನಂತಿಲ್ಲ. ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುವುದರ ಜತೆಗೆ ಪ್ರಾಕೃತಿಕ ಅಸಮತೋಲನ ಎದುರಾಗಿದೆ. ಒಂದೆಡೆ ಗಿಡ ನೆಡುವ ಕೆಲಸವಾಗುತ್ತಿದ್ದರೆ ಮತ್ತೊಂದೆಡೆ ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲೂ ಕೂಡ ಮರಗಳ ಹನನವಾಗುತ್ತಿದೆ. ಹೊರಗಿನ ಮರಗಳ್ಳರಿಂದ ಅರಣ್ಯ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಒಂದು ಸಮಯದಲ್ಲಿ ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಮಾಯವಾಗಿದೆ. ಇದಕ್ಕೆ ಮೂಲ ಕಾರಣ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು. ರೈತರ ಭತ್ತ ಬೆಳೆಯುವ ಪ್ರದೇಶಕ್ಕೆ ಇಂತಿಷ್ಟು ಸಹಾಯಧನ ನೀಡಬೇಕು. ನಮ್ಮ ಪೂರ್ವಿಕರ ಜ್ಞಾನ ಇಂದಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಇಲ್ಲ ಎಂದರು.


ಕಾಡಿನ ಬಗ್ಗೆ ಮಾಹಿತಿ ಇಲ್ಲದವರು ಅರಣ್ಯ ಮಂತ್ರಿಗಳಾಗುತ್ತಿರುವುದು ನಮ್ಮ ದುರ್ದೈವ, ಅವರಿಗೆ ಕಾಡಿನ ಬಗ್ಗೆ ಜ್ಞಾನ ಎಲ್ಲಿರಬೇಕು. ಬೆಂಗಳೂರಿನ ಹವಾ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಅರಣ್ಯದ ಬಗ್ಗೆ ಕಾನೂನು ರೂಪಿಸುವ ಜನರಿಂದ ಇಂದು ಅರಣ್ಯ ನಾಶವಾಗಿದೆ. ಆ ಫಲವಾಗಿ ಇಂದು ವನ್ಯಮೃಗಗಳು ಆಹಾರ ಅರಸಿ ನಾಡಿಗೆ ಬರುವಂತಾಗಿದೆ ಎಂದು ವಿಷಾದಿಸಿದರು.


ಸಮಾಜ ಸೇವಕ ಅಜ್ಜಿಕುಟ್ಟೀರ ಕಮಲಾ ಪೂಣಚ್ಚ ಮಾತನಾಡಿ, ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಸರಿಯಾದ ಆಹಾರ ದೊರಕದೆ ಅವು ನಾಡಿಗೆ ಲಗ್ಗೆ ಹಾಕುತ್ತಿವೆ. ಕಾಡಿನಲ್ಲಿ ಸರಿಯಾದ ನೀರಿನ ವ್ಯವಸ್ಥೆ ಹಾಗೂ ಆಹಾರ ದೊರೆತರೆ ಅವು ಖಂಡಿತಾ ನಾಡಿಗೆ ಬರುವುದಿಲ್ಲ. ಬಹುತೇಕ ಅರಣ್ಯ ನಾಶವಾಗಿದ್ದೆ, ವನ್ಯಮೃಗಗಳು ನಾಡಿಗೆ ಬರಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಕೊಡವ ರೈಡರ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಮಾತನಾಡಿದರು. ಸಮಾಜ ಸೇವಕ ಅಜ್ಜಿಕುಟ್ಟೀರ ಶಾಂತು ಪೂಣಚ್ಚ, ಬಾಂಡಿಂಗ್ ಬ್ಲೂಮ್ಸ್ ಕೊಡಗು ಅಧ್ಯಕ್ಷೆ ಬಾಚಮಾಡ ಲಿಜೇಟ್ ಭವಿ ಕುಮಾರ್, ತುಪ್ಪನಾಣಿ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಪ್ಪಣಮಾಡ ಗಣೇಶ್, ಅಂಜಿಕೇರಿ ನಾಡ್ ಜೋಡಿ ತಕ್ಕದ ಮುಖ್ಯಸ್ಥರಾದ ಚಕ್ಕೇರ ರಾಜೇಶ್, ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net