ಶ್ರೀಮಂಟೇಸ್ವಾಮಿ ಕ್ಷೇತ್ರಗಳ ಅಭಿವೃದ್ಧಿಗೆ ನಿರ್ಲಕ್ಷ್ಯ

26rajesh3
Published on

ಚಾಮರಾಜನಗರ: ವಿಶ್ವಕ್ಕೆ ಬಹುದೊಡ್ಡ ಜಾನಪದ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ ಶ್ರೀಮಂಟೇಸ್ವಾಮಿ ಪರಂಪರೆಯ ಧಾರ್ಮಿಕ ಕ್ಷೇತ್ರಗಳು ಇಂದಿಗೂ ಅಭಿವೃದ್ಧಿ ಕಾಣದೇ, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸುಮಾರು 13ನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಸಂಚರಿಸಿ, ವಿಶಿಷ್ಟವಾದ ಧಾರ್ಮಿಕ ಮಹತ್ವವನ್ನು ಸಾರಿದ ಶ್ರೀಮಂಟೇಸ್ವಾಮಿ ಐಕ್ಯ ಸ್ಥಳವಾದ ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ ಮತ್ತು ಹೊನ್ನನಾಯಕನಹಳ್ಳಿ ಕ್ಷೇತ್ರ, ಶ್ರೀರಾಚಪ್ಪಾಜಿಯವರ ಐಕ್ಯ ಸ್ಥಳವಾದ ಮೈಸೂರಿನ ಕೆ.ಆರ್.ನಗರ ತಾಲೂಕಿನ ಶ್ರೀಕಪ್ಪಡಿ ಕ್ಷೇತ್ರ, ಶ್ರೀಸಿದ್ದಪ್ಪಾಜಿಯವರ ಐಕ್ಯ ಸ್ಥಳವಾದ ಕೊಳ್ಳೇಗಾಲ ತಾಲೂಕಿನ ಶ್ರೀಚಿಕ್ಕಲ್ಲೂರು ಕ್ಷೇತ್ರ ಹಾಗೂ ಶ್ರೀಚನ್ನಯ್ಯ ಮತ್ತು ಲಿಂಗಯ್ಯ ಅವರು ಐಕ್ಯರಾದ ಕೊಳ್ಳೇಗಾಲ ತಾಲೂಕಿನ ಶ್ರೀಕುರುಬನಕಟ್ಟೆ ಕ್ಷೇತ್ರಗಳಿಗೆ ವರ್ಷವಿಡೀ ಲಕ್ಷಾಂತರ ಜನರು ಭಕ್ತರು ಭೇಟಿ ನೀಡುತ್ತಾರೆ. ಶ್ರೀಮಂಟೇಸ್ವಾಮಿ, ಶ್ರೀರಾಚಪ್ಪಾಜಿ, ಶ್ರೀಸಿದ್ದಪ್ಪಾಜಿ ಅವರನ್ನು ದೈವವಾಗಿಸಿ ನಿರಂತರವಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ವರ್ಷಕ್ಕೆ ಒಮ್ಮೆ ವಿಶೇಷವಾದ ಜಾತ್ರೆಗಳು ನಡೆಯಲಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಚಾಮರಾಜನಗರ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.

ಇಂತಹ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ನಿರ್ಲಕ್ಷ್ಯ ಮಾಡಿದ್ದು, ಅಭಿವೃದ್ಧಿ ಕಾಣದಾಗಿದೆ. ಈ ಪಂಚಕ್ಷೇತ್ರಗಳಲ್ಲಿ ರಸ್ತೆ, ಕುಡಿಯುವ ನೀರು, ವಸತಿ ಸೌಕರ್ಯ, ಶೌಚಾಲಯ ಹಾಗೂ ಇನ್ನಿತರೆ ಮೂಲಸೌಕರ್ಯವಿಲ್ಲದೇ ಭಕ್ತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಕ್ಷೇತ್ರಗಳು ಇಂದಿಗೂ ರಾಜಪರಂಪರೆಯಲ್ಲಿ ಸಾಗುತ್ತಾ ಬಂದಿದ್ದರೂ, ಅಪಾರ ಸಂಖ್ಯೆಯ ಸಮೂಹ ಇಲ್ಲಿಗೆ ನಡೆದುಕೊಳ್ಳುತ್ತದೆ. ಸಾವಿರಾರು ಸಂಖ್ಯೆಯ ನೀಲಗಾರರು ಈ ಪರಂಪರೆಯನ್ನು ಉಳಿಸಿಕೊಂಡು, ಜಾನಪದ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವುಗಳ ಅಭಿವೃದ್ಧಿ ಕಡೆಗೆ ಸರ್ಕಾರಗಳು ಈಗಲಾದರೂ ಗಮನಹರಿಸಬೇಕು ಎಂಬುದು ಭಕ್ತರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಅಲಕ್ಷ್ಯಕ್ಕೆ ಒಳಗಾದ ಪರಂಪರೆ:

ಶ್ರೀಮಂಟೇಸ್ವಾಮಿ ಪರಂಪರೆಯ ಪುಣ್ಯ ಕ್ಷೇತ್ರಗಳಲ್ಲಿ ಇಂದಿಗೂ ಸಮರ್ಪಕ ರಸ್ತೆ, ಕುಡಿಯುವ ನೀರು, ಶೌಚಾಲಯ, ವಸತಿ ಗೃಹಗಳು ಹಾಗೂ ಇನ್ನಿತರೆ ಮೂಲಸೌಕರ್ಯಗಳು ಇಲ್ಲದೇ ಸಂಪೂರ್ಣ ಅಲಕ್ಷ್ಯಕ್ಕೆ ಒಳಗಾಗಿದೆ. ಬೇರೆ ಧಾರ್ಮಿಕ ಪರಂಪರೆಗಳಿಗೆ ಹೋಲಿಕೆ ಮಾಡಿದರೇ ಇದು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶ್ರೀಮಂಟೇಸ್ವಾಮಿ ಕ್ಷೇತ್ರಗಳಲ್ಲಿ ನಿತ್ಯವೂ ಪೂಜೆ ಜರುಗುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇತ್ತೀಚೆಗೆ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಮೂಲಸೌಕರ್ಯವಿಲ್ಲದೇ ತೊಂದರೆಯಾಗುತ್ತಿದೆ. ಕಪ್ಪಡಿ, ಕುರುಬನಕಟ್ಟೆ, ಚಿಕ್ಕಲ್ಲೂರಿನಲ್ಲಿ ಮಾಂಸಹಾರ ಮತ್ತು ಸಸ್ಯಾಹಾರ ಮಾಡಿ ಸಹಪಂಕ್ತಿ ಭೋಜನ ನಡೆಸುವುದಿಂದ ಭಕ್ತರು ಉಳಿದುಕೊಳ್ಳಲು ವಸತಿ ನಿಲಯಗಳು ಇಲ್ಲದೇ ತೊಂದರೆಯಾಗಿದೆ. ಸಮರ್ಪಕವಾದ ರಸ್ತೆ, ಸಾರಿಗೆ ಸೌಲಭ್ಯವೂ ಈ ಕ್ಷೇತ್ರಗಳಿಗೆ ಇಲ್ಲದೇ ಭಕ್ತರು ನಿತ್ಯವೂ ಗೋಳು ಅನುಭವಿಸುವಂತಾಗಿದೆ.

ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಸಿದ್ಧವಾಗಿತ್ತು:

ರಾಜ್ಯದಲ್ಲಿ 2017 ರಲ್ಲಿ ಅಧಿಕಾರದಲ್ಲಿದ್ದ ಮುಖಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶ್ರೀಮಂಟೇಸ್ವಾಮಿ ಪರಂಪರೆಯ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿತ್ತು. ಬಜೆಟ್‌ನಲ್ಲಿ ಸುಮಾರು 3 ಕೋಟಿ ರೂ, ಅನುದಾನವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 1 ಕೋಟಿ ರೂ, ಶ್ರೀಮಂಟೇಸ್ವಾಮಿ ಅಧ್ಯಯನ ಪೀಠಕ್ಕೆ ನೀಡಲಾಗಿತ್ತು. ಉಳಿದಂತೆ ಮೈಸೂರು ಜಿಲ್ಲೆಗೆ 75 ಲಕ್ಷ ರೂ, ಚಾಮರಾಜನಗರಕ್ಕೆ 65 ಲಕ್ಷ ರೂ, ಹಾಗೂ ಮಂಡ್ಯ ಜಿಲ್ಲೆಗೆ 65 ಲಕ್ಷ ರೂ, ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಮೊದಲ ಹಂತದಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಗದ್ದಿಗೆಯ ಸುತ್ತಲೂ ನೆಲಹಾಸು ಹಾಗೂ ಇನ್ನಿತರೆ ಕಾಮಗಾರಿಯನ್ನು ನಡೆಸಲಾಗಿತ್ತು. ಆದರೇ ಐದು ಕ್ಷೇತ್ರಗಳ ಸಮರ್ಪಕ ಅಭಿವೃದ್ಧಿ ಕಾಣಲಿಲ್ಲ. ಅಂದುಕೊಂಡಂತೆ ಕ್ಷೇತ್ರಗಳು ಅಭಿವೃದ್ಧಿ ಕಾಣಲಿಲ್ಲ. ಮುಂದಿನ ತಿಂಗಳಲ್ಲಿ ಶ್ರೀಮಲೆ ಮಹದೇಶ್ವರಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಶ್ರೀಮಂಟೇಸ್ವಾಮಿ ಪರಂಪರೆಯ ಪುಣ್ಯ ಕ್ಷೇತ್ರಗಳಿಗೆ ಸೂಕ್ತ ಅನುದಾನವನ್ನು ನೀಡಿ, ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಶ್ರೀಮಂಟೇಸ್ವಾಮಿ ಪರಂಪರೆ ಮತ್ತು ಸಂಸ್ಕೃತಿ ಸಂಶೋಧಕ ಮಹಾದೇವ ಶಂಕನಪುರ ಆಗ್ರಹಿಸಿದ್ದಾರೆ.

ಅಭಿವೃದ್ಧಿ ಪ್ರಾಧಿಕಾರ ಮಾಡಬಾರದೇಕೆ?:

ರಾಜ್ಯದ ವಿವಿಧ ಶರಣ ಪರಂಪರೆಯ ಕ್ಷೇತ್ರಗಳು ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಆಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ಮಾಡುತ್ತಿರುವಂತೆ, ಶ್ರೀಮಂಟೇಸ್ವಾಮಿ ಪರಂಪರೆಯ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಈ ಪುಣ್ಯಕ್ಷೇತ್ರಗಳ ಅಭಿವೃದ್ಧಿಯನ್ನು ಮಾಡಬೇಕು ಎಂಬುದು ಹಲವಾರು ಚಿಂತಕರ ಅಭಿಪ್ರಾಯವಾಗಿದೆ. ಈ ಕ್ಷೇತ್ರಗಳಲ್ಲಿ ಶೌಚಾಲಯ, ಕುಡಿಯುವನೀರು, ರಸ್ತೆ, ವಸತಿ ಸೌಕರ್ಯ, ನೀಲಗಾರರ ಕಲೆಯನ್ನು ಪ್ರಚುರಪಡಿಸಲು ಬಯಲು ರಂಗಮಂದಿರ, ಸ್ನಾನಕ್ಕೆ ಕಲ್ಯಾಣಿಗಳು, ಶ್ರೀಮಂಟೇಸ್ವಾಮಿ ಪರಂಪರೆಯ ಜನಪದ ಕಾವ್ಯಗಳನ್ನು ಸಂಗ್ರಹಿಸಿ, ಜನಪದ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಬೇಕು. ಆಗಿದ್ದಾಗ ಮಾತ್ರ ಈ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀಮಂಟೇಸ್ವಾಮಿ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯತ್ತಾ ಸರ್ಕಾರಗಳು ಗಮನಹರಿಸಬೇಕು ಎಂಬುದು ನೀಲಗಾರರ ಒತ್ತಾಯವಾಗಿದೆ.

ವಿಶ್ವಕ್ಕೆ ಬಹುದೊಡ್ಡ ಜನಪದ ಕಾವ್ಯವನ್ನು ಕೊಡುಗೆಯಾಗಿ ನೀಡಿದ ಶ್ರೀಮಂಟೇಸ್ವಾಮಿ ಪರಂಪರೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರ ಈ ಕ್ಷೇತ್ರಗಳ ಅಭಿವೃದ್ಧಿಗೆ ಮನಸ್ಸು ಮಾಡಬೇಕು. ಶ್ರೀಮಂಟೇಸ್ವಾಮಿ ಪರಂಪರೆಯ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಪುಣ್ಯ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ಮಾಡಬೇಕು.

ಮಹಾದೇವ ಶಂಕನಪುರ, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net