ಶ್ರೀಬಸವೇಶ್ವರಸ್ವಾಮಿ ವಾರ್ಷಿಕ ಪೂಜೆ ಸಂಪನ್ನ

25addapalakki
Published on


ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.


ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ಸಂಜೆಯಿಂದ ಪ್ರಾರಂಭಗೊಂಡು ಮಂಗಳವಾರ ಬೆಳಗ್ಗೆ ಕೊನೆಗೊಂಡಿತು.


ಸೋಮವಾರ ಸಂಜೆ ಪೂರ್ಣಕುಂಭ ಹೊತ್ತ ಮಹಿಳೆಯರು ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿ ಮೆರವಣಿಗೆ ಮೂಲಕ ದೇವಸ್ಥಾನ ತಲುಪಿದರು. ನಂತರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವರಿಗೆ ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ದೇವರಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ವಾದ್ಯಗೋಷ್ಠಿಯೊಂದಿಗೆ ಊರಿನ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಮಂಗಳವಾರ ಬೆಳಗ್ಗೆ ದೇವಸ್ಥಾನದ ಮುಂಭಾಗದಲ್ಲಿ ಕೊಂಡೋತ್ಸವ ನೆರವೇರಿಸಲಾಯಿತು. ಅರ್ಚಕರಿಂದ ದೇವರಿಗೆ ಪೂಜೆ ಮತ್ತು ಭಕ್ತಾದಿಗಳಿಂದ ದೇವರಿಗೆ ಹಣ್ಣುಕಾಯಿ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು.

ಅರ್ಚಕರಾದ ಶಾಂತಮಲ್ಲಪ್ಪ, ಶಾಂತರಾಜು ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸದರು. ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net