ಶ್ರೀಪಾತಾಳೇಶ್ವರ ಸ್ವಾಮಿಗೆ ವಿಶೇಷ ಪೂಜೆ

13blrp1
ಅಧಿಕ ಶ್ರಾವಣ ಮಾಸದ ಅಂಗವಾಗಿ ಬೇಲೂರು ಪಟ್ಟಣದ ಶ್ರೀಪಾತಾಳೇಶ್ವರ ದೇವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿರುವುದು.
Published on

ಬೇಲೂರು: ಅಧಿಕ ಶ್ರಾವಣ ಮಾಸದ ಅಂಗವಾಗಿ ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಶ್ರೀಪಾತಾಳೇಶ್ವರ ದೇವರಿಗೆ ಪ್ರಥಮ ಬಾರಿಗೆ ನೂರಾರು ಭಕ್ತರ ಹಾಗೂ ದೇಗುಲ ಟ್ರಸ್ಟ್ ಪದಾಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.


ವಿಶೇಷ ಪೂಜಾ ಕೈಂಕರ್ಯವನ್ನು ದೇಗುಲದ ಅರ್ಚಕ ಕೆ.ಆರ್.ಮಂಜುನಾಥ್ ಮತ್ತು ತಂಡ ದೇವರಿಗೆ ಅಭಿಷೇಕ, ಮಂಗಳಾರತಿ ಹಾಗೂ ವೇದ ಘೋಷಗಳೊಂದಿಗೆ ನಡೆಸಿ ಕೊಟ್ಟರು. ನಂತರ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.


ಶ್ರೀಪಾತಾಳೇಶ್ವರ ದೇಗುಲ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, ಪಾತಾಳೇಶ್ವರ ಸ್ವಾಮಿ ದೇಗುಲ ಭಕ್ತರ ಪವಿತ್ರ ತಾಣವಾಗಿದೆ. ಪ್ರತಿ ವರ್ಷ ಟ್ರಸ್ಟ್‌ನಿಂದ ಶಿವರಾತ್ರಿ, ದೀಪಾವಳಿ ದಿನದಂದು ವಿಶೇಷ ಪೂಜೆಯೊಂದಿಗೆ, ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ ಅಧಿಕ ಶ್ರಾವಣ ಮಾಸದ ಅಂಗವಾಗಿ ಲೋಕ ಕಲ್ಯಾಣಾರ್ಥ ಅರ್ಚಕ ಕೆ.ಆರ್.ಮಂಜುನಾಥ್ ತಂಡ, ದೇಗುಲದಲ್ಲಿ ಸಾಮೂಹಿಕ ಸಂಕಲ್ಪ ಪೂಜೆ, ರುದ್ರಾಭಿಷೇಕ, ಭಜನೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಿ ದೇವರನ್ನು ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನೆರವೇರಿಸಿದರು.
ಪಟ್ಟಣದ ವಿವಿಧ ಬಡಾವಣೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.


ಅರ್ಚಕ ಕೆ.ಆರ್.ಮಂಜುನಾಥ್ ಮಾತನಾಡಿ, ಈ ಬಾರಿ ಅಧಿಕ ಶ್ರಾವಣ ಮಾಸ ಶಿವ ಮತ್ತು ವಿಷ್ಣುವಿನ ಆರಾಧನೆಗೆ ಉತ್ತಮ ಅವಕಾಶ ದೊರೆತಿದೆ. ವಿಶೇಷವಾಗಿ ಶ್ರೀಪಾತಾಳೇಶ್ವರಸ್ವಾಮಿ ದರ್ಶನ ಪಡೆಯುವ ಮೂಲಕ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳು ದೂರವಾಗಿ ಸಕಾರಾತ್ಮಕ ಚಿಂತನೆಗಳು ನೆಲೆಗೊಳ್ಳಲಿವೆ ಎಂದರು.


ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಸಿ.ಜಗದೀಶ್, ನಿರ್ದೇಶಕರಾದ ಪುಟ್ಟಸ್ವಾಮಿ, ಯಲ್ಲೇಶ್, ನಾಗರಾಜು, ಕೃಷ್ಣಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net