ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ಚಾಲನೆ

17hgr.1
Published on

ಹಲಗೂರು: ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ಆರಾಧ್ಯ ದೇವತೆಯಾದ ಶ್ರೀ ಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಜೆ ಸಂಪ್ರದಾಯದಂತೆ ಚಾಲನೆ ನೀಡಲಾಯಿತು.

ಗರ್ಭಗುಡಿಯ ಮುಂಭಾಗ ದೇವಸ್ಥಾನದ ಬಸಪ್ಪ ಬಂದು ನಿಂತಾಗ ಅರ್ಚಕರು ಪೂಜೆ ಸಲ್ಲಿಸಿ ನೈವೇದ್ಯ ನೀಡಿದರು. ಸ್ಥಳದಲ್ಲಿದ್ದ ಭಕ್ತರು ಬಸಪ್ಪನನ್ನು ಮುಟ್ಟಿ ಆಶೀರ್ವಾದ ಪಡೆದರು.

ಅರ್ಚಕರಾದ ಪ್ರಸಾದ್ ಮಾತನಾಡಿ, ನಾಲ್ಕು ದಿನ ನಡೆಯುವ ಜಾತ್ರಾ ಮಹೋತ್ಸವದ ಆರಂಭದ ಮೊದಲನೇ ದಿನ ಬೆಳಗ್ಗೆ ದೇವಿಯ ವಿಗ್ರಹಕ್ಕೆ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನಡೆಸಿ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ, ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಅದೇ ದಿನ ಸಂಜೆ ಗೋಧೂಳಿ ಲಗ್ನದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯದಂತೆ ಹಲಗೂರು ಗ್ರಾಮದಲ್ಲಿರುವ ಕರಗದ ಮನೆಯಲ್ಲಿ ದೇವಿಯ ಕರಗಕ್ಕೆ ಪೂಜೆ ಸಲ್ಲಿಸಿ, ಮಡಿಯಿಂದ ನೈವೇದ್ಯವನ್ನು ತಯಾರಿಸಿಕೊಂಡು ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನಕ್ಕೆ ಮೆರವಣಿಗೆ ಮುಖಾಂತರ ದೇವರನ್ನು ತಂದು ಶಾಸ್ತ್ರೋಕ್ತವಾಗಿ ವಿಧಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಕೊಂಡೋತ್ಸವಕ್ಕೆ ಬೇಕಾದ ತಯಾರಿಯನ್ನು ನಡೆಸಿ, ಮಹಾ ಮಂಗಳಾರತಿ ನಡೆದ ನಂತರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸುವುದರ ಮೂಲಕ ಹಲಗೂರು ಮತ್ತು ವಳಗೆರೆ ದೊಡ್ಡಿ ಗ್ರಾಮಸ್ಥರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಿದೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಕೃಷ್ಣಪ್ಪ, ನಾಡಗೌಡರಾದ ಶಿವಣ್ಣೇಗೌಡ, ಮುಖಂಡರಾದ ವಳಗೆರೆ ದೊಡ್ಡಿ ಶ್ರೀನಿವಾಸ ಮತ್ತು ಶಿವ ಸ್ವಾಮಿ, ಶಿವು ,ದರ್ಶನ, ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net