ಶ್ರೀನಿವಾಸಗೌಡ ಕೂಡಲೇ ರಾಜೀನಾಮೆ ನೀಡಲಿ : ರಾಜ್ಯಸಭೆ ಚುನಾವಣೆಯಲ್ಲಿ ಕೈಗೆ ಮತ, ಎಂಎಲ್ಸಿ ಗೋವಿಂದರಾಜು, ಕಾರ್ಯಕರ್ತರ ಅಸಮಾಧಾನ

1
Published on

ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ವಿಪ್​ ಉಲ್ಲಂಘಿಸಿ ಕಾಂಗ್ರೆಸ್​ ಅಭ್ಯರ್ಥಿ ಪರ ಮತಹಾಕಿದ ಶಾಸಕ ಕೆ.ಶ್ರೀನಿವಾಸಗೌಡ ನೈತಿಕ ಹೊಣೆ ಹೊತ್ತು ಕೂಡಲೇ ಜೆಡಿಎಸ್​ಗೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್​ ಕಾರ್ಯಕರ್ತರು ನಗರದ ಶ್ರೀನಿವಾಸಗೌಡರ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜೆಡಿಎಸ್​ ಬಾವುಟ, ಭಿತ್ತಿಪತ್ರಗಳನ್ನು ಹಿಡಿದು ಧಿಕ್ಕಾರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಪಕ್ಷದ್ರೋಹ ಬಗೆದಿರುವ ಶ್ರೀನಿವಾಸಗೌಡ ಅವರು ಒಂದು ಕ್ಷಣವೂ ಪಕ್ಷದಲ್ಲಿ ಮುಂದುವರಿಯಬಾರದು. ಕ್ಷೇತ್ರದ ಲಕ್ಷಾಂತರ ಮತದಾರರಿಗೆ ವಂಚಿಸಿ ಕಾಂಗ್ರೆಸ್​ ಅಭ್ಯರ್ಥಿಗೆ ಮತದಾನ ಮಾಡಿರುವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್​ ಶಾಸಕ ಇಂಚರ ಗೋವಿಂದರಾಜು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡ ಅವರಿಗೆ ಕಾಂಗ್ರೆಸ್​ ಟಿಕೆಟ್​ ನಿರಾಕರಿಸಿತ್ತು. ಜೆಡಿಎಸ್​ ವರಿಷ್ಠರೂ ಟಿಕೆಟ್​ ನೀಡಲು ಹಿಂದೆ&ಮುಂದೆ ನೋಡುತ್ತಿದ್ದಾಗ, ಕಾಡಿಬೇಡಿ ಅವರಿಗೇ ಟಿಕೆಟ್​ ಕೊಡುವಂತೆ ಮನವೊಲಿಸಿದ್ದೆವು. ಹೈಕಮಾಂಡ್​ ಒಲ್ಲದ ಮನಸ್ಸಿನಿಂದಲೇ ಟಿಕೆಟ್​ ನೀಡಿದಾಗ ತನುಮನ, ಧನ ಅರ್ಪಿಸಿ ಶ್ರೀನಿವಾಸಗೌಡ ಅವರನ್ನು ಗೆಲ್ಲಿಸಿಕೊಂಡೆವು. ಆದರೆ ಆ ಮನುಷ್ಯ ಅಭಿವೃದ್ಧಿ ಕಡೆಗಣಿಸಿ, ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದೆ ಮತದಾರರ ಋಣ ತೀರಿಸುವ ಬದಲು, ಕಾಂಗ್ರೆಸ್​ಗೆ ನಿಷ್ಠೆ ತೋರುತ್ತಾ ಮಾನವೀಯತೆ ಮರೆತಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ವಾರದಿಂದ ದೇವೇಗೌಡ, ಕುಮಾರಸ್ವಾಮಿ ಮತ್ತು ನಾನು ಶ್ರೀನಿವಾಸಗೌಡರ ಮನವೊಲಿಸಲು ಯತ್ನಿಸಿದೆವು. ಆದರೆ ಶ್ರೀನಿವಾಸಗೌಡ ಅವರು ನೆಪ ಇಟ್ಟುಕೊಂಡು ಪಕ್ಷದ್ರೋಹವೆಸಗಿದ್ದಾರೆ. ಅವರ ವರ್ತನೆಗೆ ಕ್ಷಮಾಪಣೆಯೇ ಇಲ್ಲ. ಜನರು ಅವರನ್ನು ಯಾವ ರೀತಿ ನೋಡುತ್ತಾರೆ ಎಂಬುದು ಕಾಲವೇ ಉತ್ತರಿಸಲಿದೆ ಎಂದರು. ಕಳೆದ 14 ವರ್ಷದಿಂದ ಶ್ರೀನಿವಾಸಗೌಡ ಮತ್ತು ವರ್ತೂರು ಪ್ರಕಾಶ್​ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ. ಈ ಅವಧಿಯಲ್ಲಿ ಶಾಸಕರಿದ್ದರೂ ಇಲ್ಲದಂತೆ ಜನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಂತಹವರನ್ನು ಜನ ಮುಂದಿನ ದಿನಗಳಲ್ಲಿ ಆರಿಸಬಾರದು ಎಂದು ಹೇಳಿದರು. ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಶ್ರೀನಿವಾಸಗೌಡರು ಕಾರ್ಯಕರ್ತರಿಗೆ ಸರಿಯಾದ ಶಿಕ್ಷೆ ನೀಡಿದ್ದಾರೆ. ಅವರನ್ನು ಗೆಲ್ಲಿಸಿದ್ದಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ ಎಂದರು. ಶಾಸಕ ಶ್ರೀನಿವಾಸಗೌಡ ಮನೆಗೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಜೆಡಿಎಸ್​ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್​, ನಗರಸಭೆ ಸದಸ್ಯ ರಾಕೇಶ್​, ಎಪಿಎಂಸಿ ಪುಟ್ಟುರಾಜು, ಮುಖಂಡರಾದ ಮಂಡಿ ರಮೇಶ್​, ಮುನಿರಾಜು ಶ್ರೀನಿವಾಸ್​ ಮುಂತಾದವರು ಇದ್ದರು.

ಶ್ರೀನಿವಾಸಗೌಡ ಅವರು ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಮತ್ತೆ ಕ್ಷೇತ್ರದಲ್ಲಿ ಆರಿಸಿ ಬರುವುದು ಸಾಧ್ಯವೇ ಇಲ್ಲ. ಅವರ ನಾಲ್ಕು ವರ್ಷಗಳ ನಡುವಳಿಕೆಯನ್ನು ಜನ ಗಮನಿಸಿದ್ದಾರೆ. ಒಂದು ವೇಳೆ ಮತ್ತೆ ಅವರು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಅವರ ಮನೆ ಬಾಗಿಲಲ್ಲಿ ನನ್ನ ಕತ್ತು ಕೊಯ್ದ್ದುಕೊಂಡು ಪ್ರಾಣ ಬಿಡುತ್ತೇನೆ. ಇಂಚರ ಗೋವಿಂದರಾಜು, ಎಂಎಲ್ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net